ಕನ್ನಡ ನಟರು ಟ್ವೀಟ್ ಮಾಡಿದರೆ ಸಾಲದು: ಇಂದ್ರಜಿತ್ ಗರಂ

ಕನ್ನಡ ನಟರು ಕೇವಲ ಟ್ವೀಟ್ ಮಾಡಿದರೆ ಸಾಲದು, ಕನ್ನಡ ಪರ ಹೋರಾಟ ಮಾಡಬೇಕು ಎಂದು ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಚಾಟಿ ಬೀಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ”ಎಂಇಎಸ್ ಪುಂಡರ ವಿರುದ್ಧ ಕನ್ನಡಪರ ಸಂಘಟನೆಗಳು ಮಾಡುತ್ತಿರುವ ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಬೇಕು. ಕನ್ನಡದ ಸಿನಿಮಾ ನಟರು ಕೇವಲ ಟ್ವೀಟ್ ಮಾಡಿ ಸುಮ್ಮನಾಗುತ್ತಿದ್ದಾರೆ. ಅವರು ಬೆಳಗಾವಿಗೆ ಬಂದು ಹೋರಾಟಗಾರ ಜೊತೆ ನಿಲ್ಲಬೇಕು” ಎಂದು ಅವರು ಹೇಳಿದ್ದಾರೆ.

” ಡಾ.ರಾಜ್‌ಕುಮಾರ್, ಅಂಬರೀಶ್ ಅವರ ಬಳಿಕ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಕಂಡು ಬಂದಿದೆ. ಕನ್ನಡ ಪರವಾದ ಹೋರಾಟಕ್ಕೆ ಬನ್ನಿ ಎಂದು ಚಿತ್ರರಂಗವನ್ನು ಕರೆಯಬೇಕಾದ ಸ್ಥಿತಿ ಬಂದಿದೆ. ಶಿವರಾಜ್ ಕುಮಾರ್ ಅವರು ಹೋರಾಟದ ನಾಯಕತ್ವ ವಹಿಸಿಕೊಳ್ಳಬೇಕಿದೆ. ಅವರ ನೇತೃತ್ವದಲ್ಲಿ ಎಲ್ಲರೂ ಹೋರಾಟದಲ್ಲಿ ಭಾಗವಹಿಸಬೇಕು” ಎಂದು ತಿಳಿಸಿದ್ದಾರೆ.

“ನಾನು ಟ್ವಿಟ್ಟರ್ ಹೋರಾಟದ ವಿರೋಧಿ. ನನಗೆ ಟ್ವಿಟ್ಟರ್ ಹೋರಾಟದಲ್ಲಿ ನಂಬಿಕೆ ಇಲ್ಲ. ನೇರವಾಗಿ ಬೆಳಗಾವಿಗೆ ಬಂದು ಹೋರಾಟದಲ್ಲಿ ಭಾಗವಹಿಸಿದ್ದೇನೆ. ಕನ್ನಡ ಭಾಷೆಯ ಉಳಿವಿಗಾಗಿ ಚಿತ್ರರಂಗದವರು ಸ್ವಯಂಇಚ್ಛೆಯಿಂದ ಬೀದಿಗಿಳಿದು ಹೋರಾಟ ಮಾಡಬೇಕಿತ್ತು. ಆದರೆ ಆ ರೀತಿ ಆಗಿಲ್ಲ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ರಾಜ್‌ ಕುಮಾರ್ ಅವರನ್ನು ಗೋಕಾಕ್ ಚಳವಳಿಗೆ ಕರೆತಂದಿದ್ದು ನಮ್ಮ ತಂದೆ ಪಿ.ಲಂಕೇಶ್ ಅವರು ರಾಜ್‌ ಕುಮಾರ್ ಅವರ ಅನುಮತಿ ಇಲ್ಲದೆ ”ಗೋಕಾಕ್ ಹೋರಾಟಕ್ಕೆ ಡಾ.ರಾಜ್’ ಎಂದು ಲೇಖನ ಬರೆದರು. ಇದರಿಂದ ರಾಜ್‌ಕುಮಾರ್ ಅವರು ಹೋರಾಟಕ್ಕೆ ಧುಮುಕಿದರು” ಎಂದು ಇಂದ್ರಜಿತ್ ಹೇಳಿದ್ದಾರೆ.

ಇದೇ ವೇಳೆ ಡಬ್ಬಿಂಗ್ ಸಿನಿಮಾಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇಂದ್ರಜಿತ್ ಲಂಕೇಶ್ ಅವರು, ”ಇತ್ತೀಚೆಗೆ ಬೇರೆ ಭಾಷೆಯ ಸಿನಿಮಾಗಳು ಡಬ್ಬಿಂಗ್ ಆಗಿ ಕನ್ನಡದಲ್ಲಿ ಬಿಡುಗಡೆ ಆಗುತ್ತಿವೆ. ಇದು ಹೀಗೆ ಮುಂದುವರೆದರೆ ಕನ್ನಡದ ನಟ-ನಟಿಯರು ಕೇವಲ ಡಬ್ಬಿಂಗ್ ಕಲಾವಿದರಾಗಿ ಉಳಿಯಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಕೆಲ ದಿನಗಳ ಹಿಂದೆ ಕನ್ನಡ ಪರ ಸಂಘಟನೆಗಳು ಎಂಇಎಸ್‌ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್‌ ಕಾರ್ಯಕರ್ತರು, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದರು. ಬಳಿಕ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು “ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ” ಎಂದು ಹೇಳಿಕೊಂಡಿದ್ದರು.

ಈ ಬಗ್ಗೆ ಕನ್ನಡ ಚಿತ್ರರಂಗದ ಶಿವರಾಜ್ ಕುಮಾರ್, ಜಗ್ಗೇಶ್, ಗಣೇಶ್ ದುನಿಯಾ ವಿಜಯ್ ಸೇರಿದಂತೆ ಹಲವು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತಪಡಿಸಿದ್ದರು.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!