ಪ್ರತಿವರ್ಷದಂತೆ ಈ ವರ್ಷವು ಕೂಡ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ತನ್ನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ಆದರೆ ಕೊರೊನಾ ಕಾರಣದಿಂದ ಈ ಬಾರಿ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ಅರ್ಹ ಗಣ್ಯರಿಗೆ ನೀಡಿ ಸನ್ಮಾನಿಸಲು ರಾಘವೇಂದ್ರ ಚಿತ್ರವಾಣಿ ಸಂಸ್ಥೆ ನಿರ್ಧರಿಸಿದೆ.
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಎನ್.ಕುಮಾರ್, ನಿರ್ದೇಶಕ ಇಂದ್ರಜಿತ್ ಲಂಕೇಶ್ ,ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಹಾಗೂ ಗಾಯಕಿ ಇಂದು ವಿಶ್ವನಾಥ್ಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಎನ್. ಕುಮಾರ್ ನಿರ್ಮಾಪಕರಾಗಿ, ವಿತರಕರಾಗಿ ಹೆಸರು ಮಾಡಿದ್ದಾರೆ. ಹಾಗೆಯೇ ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಅವರು ಹಲವು ವರ್ಷ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಬ್ಬರ ಸೇವೆ ಮತ್ತು ಪರಿಶ್ರಮ ಪರಿಗಣಿಸಿ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ತನ್ನ 2021ಸಾಲಿನ ವಾರ್ಷಿಕ ಪ್ರಶಸ್ತಿ ನೀಡುತ್ತಿದೆ.
ಹಾಗೆಯೇ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಕೊಡಮಾಡುವ ಡಾ.ರಾಜ್ ಕುಮಾರ್ ಪ್ರಶಸ್ತಿಗೆ ಹೆಸರಾಂತ ಗಾಯಕಿ ಶ್ರೀಮತಿ ಇಂದು ವಿಶ್ವನಾಥ್ ಪಾತ್ರರಾಗಿದ್ದಾರೆ. ಹಿರಿಯ ನಟಿ ಶ್ರೀಮತಿ ಡಾ. ಭಾರತಿ ವಿಷ್ಣುವರ್ದನ್ ಅವರು ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮೂಲಕ ನೀಡುವ ನಿರ್ದೇಶಕ ದಿ.ಆರ್.ಶೇಷಾದ್ರಿ ಪ್ರಶಸ್ತಿಗೆ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ಜ.25 ಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44 ನೇ ವಾರ್ಷಿಕೋತ್ಸವ ಹಾಗೆಯೇ ಚಿತ್ರವಾಣಿ ಸಂಸ್ಥೆಯ ಸ್ಥಾಪಕ ದಿವಂಗತ ಡಿ.ವಿ. ಸುಧೀಂದ್ರ ಅವರ ಹುಟ್ಟುಹಬ್ಬ. ಅದೇ ಕಾರಣಕ್ಕೆ ಸಂಸ್ಥೆಯು ಜ.25ರಂದು ಸೋಮವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರೇಣುಕಾಂಬ ಸ್ಟುಡಿಯೋದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಿದೆ. ಪ್ರತಿವರ್ಷ ನೀಡುತ್ತಿದ್ದ 11 ಪ್ರಶಸ್ತಿಗಳ ಪೈಕಿ ನಾಲ್ಕು ಪ್ರಶಸ್ತಿಗಳನ್ನು ಮಾತ್ರ ನೀಡುತ್ತಿರುವುದಕ್ಕೆ ಕೊರೊನಾ ಕಾರಣ ಎಂದು ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮುಖ್ಯಸ್ಥರಾದ ಸುಧೀಂದ್ರ ವೆಂಕಟೇಶ್ ಹೇಳಿದ್ದಾರೆ.
Be the first to comment