ಇಂದಿನ ತಲೆಮಾರಿನ ಯುವಕರ ಜೀವನ ಶೈಲಿ, ತಂತ್ರಜ್ಞಾನ ಬಳಕೆ, ಸ್ಮಾರ್ಟ್‌ಫೋನ್ ಸಂಸ್ಕೃತಿಯ ಕಥೆಯ ಹೊಸ ಪ್ರಯೋಗಾತ್ಮಕ ಸಿನಿಮಾ ‘ಇಂದಿರಾ’ ಘೋಷಣೆ ಆಗಿದೆ.
‘ರಾವೆನ್’ ಸಿನಿಮಾ ನಿರ್ದೇಶಿಸಿದ್ದ ವೇದ್ ಅವರು ಇದೀಗ ‘ಇಂದಿರಾ’ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಕಿರಣ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಕಿರಣ್ ಕುಮಾರ್ ಎಂ. ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇಂದಿನ ಯುವಕರು ತಂತ್ರಜ್ಞಾನವನ್ನು ಹೇಗೆ ಬಳಸುತ್ತಾರೆ? ಹೇಗೆ ದುರುಪಯೋಗ ಹಾಗೂ ಸದ್ಬಳಕೆ ಆಗುತ್ತಿದೆ ಎಂಬ ಅಂಶಗಳನ್ನು ಮನರಂಜನೆಯೊಂದಿಗೆ ಚಿತ್ರದಲ್ಲಿ ಹೇಳಲಾಗುತ್ತಿದೆ.
ಸಿನಿಮಾ ಮಹಿಳಾ ಪ್ರಧಾನ ಕಥಾಹಂದರ ಹೊಂದಿದ್ದು, ಸಮಾಜಕ್ಕೆ ಸಂದೇಶ ನೀಡುವ ಉದ್ದೇಶವೂ ಇದರಲ್ಲಿ ಅಡಗಿದೆ. ಇದು ಇಂದಿರಾ ಗಾಂಧಿ ಅಥವಾ ರಾಜಕೀಯ ಕಥೆಯೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಕಥೆಯ ಶಕ್ತಿಯನ್ನು ಸೂಚಿಸುವ ಪವರ್‌ಫುಲ್ ಟೈಟಲ್ ಆಗಿ ಈ ಹೆಸರನ್ನು ಆಯ್ಕೆ ಮಾಡಲಾಗಿದೆ ಎಂದು ನಿರ್ದೇಶಕ ವೇದ್ ತಿಳಿಸಿದ್ದಾರೆ.
ಸಿನಿಮಾದ ಮುಖ್ಯ ಪಾತ್ರಕ್ಕೆ ಕನ್ನಡದ ಜನಪ್ರಿಯ ನಟಿಯನ್ನು ಆಯ್ಕೆ ಮಾಡುವ ಯೋಜನೆ ಇದೆ. ಮಾರ್ಚ್ ಅಂತ್ಯದೊಳಗೆ ಕಲಾವಿದರ ಆಯ್ಕೆ ಪೂರ್ಣಗೊಳಿಸಿ ಶೂಟಿಂಗ್ ಆರಂಭಿಸಲಾಗುವುದು. ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆ ಮಾಡುವ ಗುರಿ ಚಿತ್ರತಂಡಕ್ಕಿದೆ.
ರವಿವರ್ಮ ಛಾಯಾಗ್ರಹಣ ಮತ್ತು ಧನುಶ್ ಸಂಕಲನ ಚಿತ್ರಕ್ಕಿದೆ.
——





Be the first to comment