ಈ ತಿಂಗಳಿನಲ್ಲಿ ಗೋವಾದಲ್ಲಿ ನಡೆಯಲಿರುವ 52ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂಡಿಯನ್ ಪನೋರಮಾ ವಿಭಾಗದಿಂದ ಒಟ್ಟು 4 ಕನ್ನಡ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಗೋವಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಬಾರಿ ಒಟ್ಟು 25 ಚಲನಚಿತ್ರಗಳು ಮತ್ತು 20 ಚಲನಚಿತ್ರೇತರ ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿವೆ.
ಆಕ್ಟ್ 1978 (ನಿರ್ದೇಶನ ಮಂಜುನಾಥ ಎಸ್-ಮನಸೋರೆ), ನೀಲಿಹಕ್ಕಿ (ಗಣೇಶ್ ಹೆಗಡೆ), ತಲೆದಂಡ (ಪ್ರವೀಣ್ ಕೃಪಾಕರ್) ಹಾಗೂ ಡೊಳ್ಳು (ಸಾಗರ್ ಪುರಾಣಿಕ್) ಈ ನಾಲ್ಕು ಸಿನಿಮಾಗಳು ಕನ್ನಡ ಭಾಷೆಯಿಂದ ಆಯ್ಕೆಯಾಗಿವೆ.
ಇದೇ ತಿಂಗಳ 20 ರಿಂದ 28ರವರೆಗೆ ಗೋವಾದಲ್ಲಿ ಚಲನ ಚಿತ್ರೋತ್ಸವ ನಡೆಯಲಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬ್ ನೇತೃತ್ವದ 12 ಸದಸ್ಯರನ್ನು ಒಳಗೊಂಡ ಚಲನಚಿತ್ರ ತೀರ್ಪುಗಾರರ ಸಮಿತಿ ಒಟ್ಟು 25 ಸಿನಿಮಾಗಳನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿದೆ. ಅಂತೆಯೇ ಸಾಕ್ಷ್ಯಚಿತ್ರ ನಿರ್ದೇಶಕ ಎಸ್. ನಲ್ಲಮುತ್ತು ಅವರ ನೇತೃತ್ವದ ಸಮಿತಿ ಒಟ್ಟು 20 ನಾನ್-ಫೀಚರ್ ಸಿನಿಮಾಗಳನ್ನು ಆಯ್ಕೆ ಮಾಡಿದೆ.
ಭಾರತೀಯ ಚಲನಚಿತ್ರೋತ್ಸವ ನಿರ್ದೇಶನಾಲಯ, ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಗೋವಾ ಸರ್ಕಾರದ ಸಹಯೋಗದಲ್ಲಿ 52ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜನೆ ಮಾಡಿದೆ.
Be the first to comment