ಚಿತ್ರ ವಿಮರ್ಶೆ : ಇಮೇಜ್ ಮೀರಿದ ಪುನೀತ್; ಇದು ಅಭಿಮಾನಿಗಳ ಸಿನಿಮಾ

ಸಿನಿಮಾ: ನಟಸಾರ್ವಭೌಮ | ನಿರ್ದೇಶನ: ಪವನ್ ಒಡೆಯರ್ | ನಿರ್ಮಾಣ: ರಾಕ್‍ಲೈನ್ ವೆಂಕಟೇಶ್ | ಸಂಗೀತ: ಡಿ.ಇಮಾನ್ | ಛಾಯಾಗ್ರಹಣ: ವೈದ್ಯ | ತಾರಾಬಳಗ: ಪುನೀತ್ ರಾಜಕುಮಾರ್, ರಚಿತಾ ರಾಮ್, ಅನುಪಮಾ ಪರಮೇಶ್ವರನ್, ಚಿಕ್ಕಣ್ಣ, ಸಾಧು ಕೋಕಿಲ, ರವಿಶಂಕರ್ ಮತ್ತಿತರರು.
————-
ಸ್ಟಾರ್ ಹೀರೋಗಳು ತಮ್ಮ ಸಿನಿಮಾಗಳಿಗೆ ಸ್ವತಃ ತಾವಾಗಿಯೇ ಒಂದಷ್ಟು ಮಿತಿ ಹಾಕಿಕೊಂಡಿರುತ್ತಾರೆ. ವರ್ಷಕ್ಕೊಂದು ಇಲ್ಲವೇ ಎರಡು ವರ್ಷಕ್ಕೆ ಮೂರು ಸಿನಿಮಾ ಮಾಡುವ ಸಂಪ್ರದಾಯ ಅವರದು. ಹಾಗಾಗಿ ಸಾಕಷ್ಟು ಲೆಕ್ಕಾಚಾರದೊಂದಿಗೆ ಸಿನಿಮಾ ಒಪ್ಪಿಕೊಳ್ಳುತ್ತಾರೆ. ಒಂದೆಡೆ ಸಾಂಪ್ರದಾಯಿಕ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸುವಂತಿಲ್ಲ. ಮತ್ತೊಂದೆಡೆ ಇಂತಹ ಮಿತಿಗಳ ಮಧ್ಯೆಯೇ ಹೊಸತನಕ್ಕೂ ಒಡ್ಡಿಕೊಳ್ಳಬೇಕು. ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಒತ್ತಡ ಅವರದು. ‘ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಇಂಥದ್ದೊಂದು ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

‘ನಟಸಾರ್ವಭೌಮ’ ಶೀರ್ಷಿಕೆ ನಿಗಧಿಯಾದಾಗಲೇ ಚಿತ್ರದ ಬಗ್ಗೆ ಕುತೂಹಲವಿತ್ತು. ನಿರ್ದೇಶಕ ಪವನ್ ಒಡೆಯರ್ ಕತೆಯ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಚಿತ್ರಕಥೆಯಲ್ಲಿ ಹಾರರ್ ಟಚ್ ಇರುವುದು ಗೊತ್ತಾಗಿದ್ದು ಟ್ರೈಲರ್ ಹೊರಬಿದ್ದಾಗಲೇ. ಹಾಗೆ ನೋಡಿದರೆ ಪುನೀತ್ ಸಿನಿಬದುಕಿನಲ್ಲಿ ಇದು ಹೊಸ ರೀತಿಯ ವಸ್ತು. ಅಭಿಮಾನಿಗಳ ಅಪೇಕ್ಷೆ, ಪುನೀತ್ ಇಮೇಜ್ ಬಲಿಕೊಡದೆ ಪವನ್ ಕತೆಯಲ್ಲಿ ಒಂದಷ್ಟು ಹೊಸತನ ತರಲು ಯತ್ನಿಸಿದ್ದಾರೆ. ಪುನೀತ್ ಕೂಡ ಚಿತ್ರವನ್ನು ಹೆಗಲಮೇಲೆ ಹೊತ್ತು ನಡೆದಿದ್ದು, ನಿರ್ದೇಶಕರು ಮತ್ತು ಇತರೆ ತಂತ್ರಜ್ಞರ ಹೊರೆ ಕಡಿಮೆ ಮಾಡಿದ್ದಾರೆ. ಹಾರರ್, ಆಕ್ಷನ್, ಡ್ಯಾನ್ಸ್, ಕಾಮಿಡಿ ಎಲ್ಲವೂ ಇರುವ ಚಿತ್ರದ ನಿರೂಪಣೆ ಇನ್ನಷ್ಟು ಬಿಗಿಯಾಗಬೇಗಿತ್ತು.

ಪುನೀತ್ ಇಲ್ಲಿಯವರೆಗೂ ಹಾರರ್ ಎಳೆಯ ಕತೆಯನ್ನು ಮಾಡಿರಲಿಲ್ಲ. ಈ ಮಟ್ಟಿಗೆ ಅವರಿಲ್ಲಿ ಇಮೇಜ್ ಮೀರಿ ಹೊಸತನಕ್ಕೆ ತೆರೆದುಕೊಂಡಿರುವುದು ಅವರ ಸಿನಿಬದುಕಿನ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ. ಚಿತ್ರದುದ್ದಕ್ಕೂ ಅವರ ಉಪಸ್ಥಿತಿ ಎದ್ದು ಕಾಣುವುದಲ್ಲದೆ, ಡ್ಯಾನ್ಸ್‍ಗಳಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತಾರೆ. ನೃತ್ಯದಲ್ಲಿ ಅವರಿಗೆ ಮತ್ತಷ್ಟು ಪುಟ್ಟಮಕ್ಕಳು ಅಭಿಮಾನಿಗಳಾಗುವುದರಲ್ಲಿ ಸಂಶಯವಿಲ್ಲ. ಇಬ್ಬರು ನಾಯಕಿಯರ ಪೈಕಿ ಅನುಪಮಾ ಪರಮೇಶ್ವರನ್ ನೆನಪಿನಲ್ಲುಳಿಯುತ್ತಾರೆ. ರಿಲೀಫ್‍ಗೆ ಚಿಕ್ಕಣ್ಣ ಮತ್ತು ಸಾಧುಕೋಕಿಲ ಕಾಮಿಡಿಯಿದೆ. ರವಿಶಂಕರ್ ಹೊರತಾಗಿ ಇತರೆ ಪೋಷಕ ಪಾತ್ರಗಳಿಗೆ ಹೆಚ್ಚು ಸ್ಕೋಪ್ ಇಲ್ಲ.

ಕನ್ನಡ ಚಿತ್ರಗಳನ್ನು ಕೊಲ್ಕತ್ತಾದಲ್ಲಿ ಚಿತ್ರಿಸಿದ ಉದಾಹರಣೆ ಕಡಿಮೆ. ಆ ಮಟ್ಟಿಗೆ ನಿರ್ದೇಶಕ ಪವನ್ ಒಡೆಯರ್ ಗೆದ್ದಿದ್ದಾರೆ. ಕೊಲ್ಕತ್ತಾದಲ್ಲಿ ಚಿತ್ರಿಸಿರುವ ಪುನೀತ್ ಮತ್ತು ಅನುಪಮಾ ಅವರ ಸನ್ನಿವೇಶಗಳು ಆಪ್ತವಾಗುತ್ತವೆ. ಜಯಂತ ಕಾಯ್ಕಿಣಿ ಮತ್ತು ಕವಿರಾಜ್ ಅವರ ಒಂದೊಂದು ಗೀತೆಗಳು ಉತ್ತಮ ಸಾಹಿತ್ಯದಿಂದ ಗಮನಸೆಳೆದರೂ, ಸಂಗೀತಕ್ಕೆ ಗುನುಗುವ ಗುಣವಿಲ್ಲ. ಪುನೀತ್‍ಗೆ ನೃತ್ಯ ಸಂಯೋಜಿಸಿರುವ ಸಂಗೀತ ನಿರ್ದೇಶಕರಿಗೆ ಅಭಿನಂದನೆ ಸಲ್ಲಬೇಕು. ಹಾಡುಗಳನ್ನು ಸುಂದರವಾಗಿ ಸೆರೆಹಿಡಿದಿರುವ ಛಾಯಾಗ್ರಾಹಕ ವೈದ್ಯ ಆಕ್ಷನ್ ದೃಶ್ಯಗಳನ್ನು ಮತ್ತಷ್ಟು ಆಕರ್ಷಕವಾಗಿಸಬಹುದಿತ್ತು. ಇಂತಹ ಕೆಲವೇ ಮಿತಗಳ ಮಧ್ಯೆ ಇದನ್ನು ಫ್ಯಾಮಿಲಿ ಎಂಟರ್‍ಟೇನರ್ ಚಿತ್ರಗಳ ಪಟ್ಟಿಗೆ ಸೇರ್ಪಡೆಗೊಳಿಸಬಹುದು.

This Article Has 2 Comments
  1. Pingback: Digital Transformation

  2. Pingback: Devsecops

Leave a Reply

Your email address will not be published. Required fields are marked *

Translate »
error: Content is protected !!