ಐ1: ಸಸ್ಪೆನ್ಸ್ ಗ್ಯಾರೆಂಟಿ

ಮೂವರು ವ್ಯಕ್ತಿಗಳು ಒಂದು ಟೆಂಪೊ ಟ್ರಾವೆಲ್ಲರ್ ವಾಹನದಲ್ಲಿ ಸಿಲುಕಿರುತ್ತಾರೆ. ಅವರು ಅಲ್ಲಿ ಯಾವ ರೀತಿಯ ಕಷ್ಟ ಎದುರಿಸುತ್ತಾರೆ ಎಂಬುದು ಚಿತ್ರದ ಕಥೆ. ಆ ವಾಹನದಲ್ಲಿ ಅವರು ಸಿಲುಕಿದ್ದು ಏಕೆ ಎಂಬುದೂ ಕಥೆಯ ಒಂದು ಭಾಗ. ಇದೊಂದು ವಿಭಿನ್ನ ಕಥೆ. ಈ ಚಿತ್ರದ ಕಥೆ ನಡೆಯುವುದೆಲ್ಲ ಈ ವಾಹನದ ಒಳಗೆ…’

ಆರ್.ಎಸ್. ರಾಜ್‌ಕುಮಾರ್‌ ಅವರು ತಮ್ಮ ನಿರ್ದೇಶನದ ಮೊದಲ ಸಿನಿಮಾ ‘ಐ1’ ಬಗ್ಗೆ ಇಷ್ಟೆಲ್ಲ ಮಾಹಿತಿ ನೀಡುತ್ತಿದ್ದರು. ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಅವರು ಸುದ್ದಿಗೋಷ್ಠಿ ಕರೆದಿದ್ದರು. ‘ಒಂದು ವಾಹನದ ಒಳಗೆ ಎಷ್ಟರಮಟ್ಟಿಗೆ ಕಥೆಯನ್ನು ವಿಸ್ತರಿಸಲು ಸಾಧ್ಯ? ಹೊರಾಂಗಣ ಚಿತ್ರೀಕರಣವೇ ಇಲ್ಲವೇ’ ಎಂಬ ಪ್ರಶ್ನೆ ಆಗ ತೂರಿಬಂತು.

‘ಚಿತ್ರ ವೀಕ್ಷಿಸುವ ಸಂದರ್ಭದಲ್ಲಿ ಪ್ರತಿ 10 ನಿಮಿಷಗಳಿಗೆ ಒಮ್ಮೆ ವೀಕ್ಷಕರು ಸೀಟಿನ ಅಂಚಿಗೆ ಬರಬೇಕಾಗುತ್ತದೆ. ಅಷ್ಟೊಂದು ಸಸ್ಪೆನ್ಸ್‌, ಥ್ರಿಲ್ ಇದರಲ್ಲಿ ಇದೆ’ ಎಂದರು ಚಿತ್ರದ ಕಪ್ತಾನ ರಾಜ್‌ಕುಮಾರ್. ‘ಇದೊಂದು ಭಿನ್ನ ಕಥೆಯನ್ನು ಹೊಂದಿರುವ ಸಿನಿಮಾ. ಪ್ರೀತಿ ಮತ್ತು ಆಯಕ್ಷನ್ ಇರುವ ಸಿನಿಮಾಗಳು ಮಾಮೂಲು. ನಮ್ಮ ಸಿನಿಮಾ ಒಂದು ರೀತಿಯಲ್ಲಿ ಪ್ರಯೋಗಾತ್ಮಕ ಸಿನಿಮಾ ಕೂಡ ಹೌದು. ಐ1 ಅಂದರೆ ಏನು ಎಂಬುದು ಕೂಡ ಒಂದು ಸಸ್ಪೆನ್ಸ್’ ಎಂದರು ಅವರು.

ಈ ಚಿತ್ರದ ಕಥೆ ಕೇಳಿದ ತಕ್ಷಣವೇ ನಿರ್ಮಾಪಕಿ ಶೈಲಜಾ ಪ್ರಕಾಶ್ ಅವರು ಹಣ ಹೂಡಲು ನಿರ್ಧರಿಸಿದರಂತೆ. ‘ಚಿತ್ರೀಕರಣ ನಡೆದ ವಾಹನವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಚಿತ್ರವನ್ನು ನೋಡುವಾಗ ಕಣ್ಣ ಎದುರಿನಲ್ಲಿ ಒಂದಿಷ್ಟು ದೃಶ್ಯಗಳು ಹಾದು ಹೋಗುತ್ತಿರುತ್ತವೆ. ಅದರ ಜೊತೆಯಲ್ಲೇ, ಮನಸ್ಸಿನಲ್ಲಿ ಇನ್ನೊಂದು ಬಗೆಯಲ್ಲಿ ದೃಶ್ಯಗಳು ಸಾಗುತ್ತಿರುತ್ತವೆ. ಇದಂತೂ ಖಚಿತ’ ಎಂದರು ರಾಜ್‌ಕುಮಾರ್.

ಕಿಶೋರ್, ರಂಜನ್ ಮತ್ತು ಧೀರಜ್ ಪ್ರಸಾದ್ ಅವರು ಚಿತ್ರದ ಮುಖ್ಯ ಪಾತ್ರಗಳನ್ನು ನಿಭಾಯಿಸಿದ್ದಾರೆ. ಚಿತ್ರವು ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆ ಆಗಿದೆ ಎಂದು ಸಿನಿಮಾ ತಂಡ ಹೇಳಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!