ಹೊಸ ಮಾರ್ಗದಲ್ಲಿ ಚೇತನ್

ಚೇತನ್ ಅವರ ನಟನೆಯ ಹೊಸ ಚಿತ್ರಕ್ಕೆ ಮುಹೂರ್ತ ಸಮಾರಂಭ ನೆರವೇರಿದೆ. ಚಿತ್ರದಲ್ಲಿ ದಿಯಾ ಖ್ಯಾತಿಯ ಖುಷಿ ಮತ್ತು ಏಕ್ ಲವ್ ಯಾ ಚಿತ್ರದ ನಾಯಕಿ ಗ್ರೀಷ್ಮಾ ನಾಣಯ್ಯ ಚೇತನ್ ಅವರಿಗೆ ಜೋಡಿಯಾಗಿದ್ದಾರೆ. ಚಿತ್ರದ ಮುಹೂರ್ತ ದೃಶ್ಯಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಂದು ಕ್ಲ್ಯಾಪ್ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಕತೆಯಾಗಿದ್ದು, ಚಿತ್ರಕ್ಕೆ ‘ಮಾರ್ಗ’ ಎಂದು ಹೆಸರಿಡಲಾಗಿದೆ. ಸಾಮಾಜಿಕ ಹೋರಾಟಗಳ ಮೂಲಕ ಸುದ್ದಿಯಾಗುತ್ತಿರುವ ಚೇತನ್ ಸಿನಿಮಾ ನಟನಾಗಿ ಕಾಣಿಸುವುದೇ ಅಪರೂಪ ಎನ್ನುವಂತಾಗಿತ್ತು. ಹಾಗಾಗಿ ಈ ಬಗ್ಗೆ ಬಿ ಸಿನಿಮಾಸ್ ಅವರನ್ನು ಮಾತನಾಡಿಸಿದಾಗ ಅವರು ನೀಡಿದ ಪ್ರತಿಕ್ರಿಯೆ ಹೀಗಿದೆ.

ಸಿನಿಮಾದ ಮೂಲಕ ತೋರಿಸಲಿರುವುದು ನಿಮ್ಮ ಹೋರಾಟದ ‘ಮಾರ್ಗ’ವೇ?

ಖಂಡಿತವಾಗಿ ಇಲ್ಲ. ಇದು ನನ್ನ ಕತೆಯಲ್ಲ. ಈ ಚಿತ್ರದಲ್ಲಿ ಫಿಲಾಸಫಿಗಿಂತ ತಂತ್ರಜ್ಞಾನ, ಆಧುನಿಕತೆಗೆ ಹೆಚ್ಚು ಒತ್ತು ನೀಡಲಾಗಿದೆ. ಒಟ್ಟಿನಲ್ಲಿ ಇದು ನಿರ್ದೇಶಕ ಮೋಹನ್ ಅವರದೇ ಶೀರ್ಷಿಕೆ. ನನ್ನ ಹೋರಾಟದ ಮಾರ್ಗಕ್ಕಿಂತ ಚಿತ್ರ ನೋಡಿದ ಮೇಲೆ ಈ ಕತೆಗೆ ಹೆಚ್ಚು ಹೊಂದಿಕೊಳ್ಳುತ್ತದೆ ಎನ್ನುವುದು ನಿಮಗೆ ಗೊತ್ತಾಗಬಹುದು. ನಿಮಗೆ ಕಾಣುವಂತೆ ಚಿತ್ರದ ಪೋಸ್ಟರ್‌ನಲ್ಲಿ ಒಂದು ರಸ್ತೆಯೂ ಇದೆ. ಇವೆಲ್ಲವೂ ಕತೆಗೆ ಪೂರಕವಾಗಿರುತ್ತದೆ.

ಇತ್ತೀಚೆಗೆ ನೀವು ಸಿನಿಮಾ ರಂಗದಿಂದ ದೂರವಾಗಿರುವುದು ಏಕೆ?

ಸಿನಿಮಾರಂಗದಲ್ಲಿ ಇರಬೇಕು ಎಂದರೆ ನಟನೆ ಮಾತ್ರ ಮಾಡುವುದು ಎಂದು ನಾನು ಅಂದುಕೊಂಡಿಲ್ಲ. ಸಿನಿಮಾರಂಗದ ಏಳಿಗೆಗಾಗಿ ಕೆಲಸ‌ಮಾಡುತ್ತಿದ್ದರೆ ಸಾಕು.‌ ಚಿತ್ರರಂಗದಿಂದ ವಸತಿ ಸಚಿವರೇ ಇದ್ದರೂ ಕಾರ್ಮಿಕರಿಗೆ ವಸತಿ ಸೌಲಭ್ಯ ದೊರಕದ ಪರಿಸ್ಥಿತಿ ಇತ್ತು. ಇಂಥ ಸಂದರ್ಭದಲ್ಲಿ ಕಷ್ಟದಲ್ಲಿರುವ ನಾಲ್ಕೈದು ಸಾವಿರ ಕಾರ್ಮಿಕರ ಲೆಕ್ಕ ಸಂಗ್ರಹಿಸಿದ್ದೇವೆ. ಅವರಲ್ಲಿ ತುಂಬ ಕಷ್ಟದಲ್ಲಿರುವ ಎರಡು ಸಾವಿರ ಮಂದಿಯನ್ನು ಆಯ್ದುಕೊಂಡು ಮೊದಲು ಅವರಿಗೆ ವಸತಿ ಸೌಲಭ್ಯ ನೀಡುವ ಪ್ರಯತ್ನ ನಡೆದಿದೆ.

ಕಾರ್ಮಿಕರಿಗಾಗಿ‌ 246 ಮನೆಗಳನ್ನು ಸರ್ಕಾರದ ಮೂಲಕ ಮಾಡಿದ್ದೇವೆ. ಪವನ್ ಕುಮಾರ್ ಅವರೊಂದಿಗೆ ಸೇರಿ `ಫೈರ್’ ಸಂಸ್ಥೆಯ ಮೂಲಕ ಐನೂರು ಮಂದಿ ಕಾರ್ಮಿಕರಿಗೆ ಎರಡೆರಡು ಸಾವಿರದಂತೆ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. ಸಿನಿಮಾ ಕಾರ್ಮಿಕರಿಗೆ ಊಟದ ಪದಾರ್ಥಗಳನ್ನು ಹಂಚಿದ್ದೇವೆ.
ಸ್ಕ್ರಿಪ್ಟ್ ಬರೆಯುವ, ಕೇಳುವ ಕೆಲಸ ನಡೆದಿದೆ. ಒಂದಷ್ಟು ದಿನದೊಳಗೆ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದರೂ ಆಯಿತು. ಒಟ್ಟಿನಲ್ಲಿ
ಸಿನಿಮಾನೇ ಮಾಡಬೇಕು ಎನ್ನುವುದಕ್ಕಿಂತ ಸಿನಿಮಾನೂ ಮಾಡಬೇಕು ಎನ್ನುವ ನಿಲುವಷ್ಟೇ ನನ್ನದಾಗಿದೆ.

ಹಾಗಾದರೆ ನಟನೆ ನಿಮ್ಮ ವೃತ್ತಿಯಲ್ಲ ಎನ್ನಬಹುದೇ?

ನಟನೆಯೇ ವೃತ್ತಿ. ಯಾಕೆಂದರೆ ಸಿನಿಮಾದಿಂದಲೇ ನನಗೆ ಸಂಪಾದನೆಯಾಗಬೇಕು. ಸಾಮಾಜಿಕ ಹೋರಾಟದಿಂದ ಯಾವುದೇ ದುಡ್ಡು ಬರುವುದಿಲ್ಲ. ಹೋರಾಟದ ಮೂಲಕ ನಾವು ಸಮಾಜಕ್ಕೆ ನೀಡುತ್ತಿದ್ದೇವೆ. ನಟನೆಯಿಂದಲೇ ವೃತ್ತಿ ಸಂಪಾದನೆ ಬರುವುದು. ಅಂದರೆ ನನಗೆ ಸಿನಿಮಾದಲ್ಲಿ ಏನು ಯಶಸ್ಸು ಸಿಕ್ಕಿದೆ ಅದನ್ನು ಸಮಾಜಕ್ಕೆ ಹೇಗೆ ವಾಪಾಸು ಕೊಡಬಹುದು ಎನ್ನುವ ಪ್ರಯತ್ನ ನನ್ನದು. ಎಲ್ಲರೂ ಸಮಾಜದಿಂದ ಪಡೆದವರು ಅವರವರ ಕೈಲಾದಷ್ಟು ಸಮಾಜಕ್ಕೆ ಸಹಾಯ ಮಾಡಲಿ ಎನ್ನುವುದು ನನ್ನ ಹಾರೈಕೆ. ನನಗಂತೂ ಕೊಟ್ಟಷ್ಟು ಸಂತೋಷ, ತೃಪ್ತಿ ಎಲ್ಲವೂ ಸಿಗುತ್ತಿದೆ.

ನಿಮ್ಮ ಹೋರಾಟಗಳು ನಿಮ್ಮನ್ನು ಸಿನಿಮಾರಂಗದಿಂದ ದೂರ ಮಾಡಿದಂತೆ ಅನಿಸಿದೆಯೇ?

ಹೋರಾಟ ಬೆಳೆದಷ್ಟು ಹೊಡೆತ ಆಗಬಹುದು ಅಥವಾ ಒಳಿತೂ ಆಗಬಹುದು. ಅದು ಹೋರಾಟದ ಬಗ್ಗೆ ಅವರ ಅಭಿಪ್ರಾಯ ಹೇಗಿರುತ್ತದೋ ಹಾಗೆ ಇರುತ್ತದೆ. ಉದಾಹರಣೆಗೆ ಅಪ್ಪು ಅವರು ಇಂದಿನ ಮುಹೂರ್ತಕ್ಕೆ ನನ್ನಲ್ಲಿನ ಕಲಾವಿದನನ್ನು ನೋಡಿ ಬಂದಿದ್ದಾರೆ. ಹೋರಾಟಗಳ ಬಗ್ಗೆ ಅವರ ಅಭಿಪ್ರಾಯ ಏನು ಎನ್ನುವುದನ್ನು ನಾನು ಕೇಳಿಲ್ಲ. ಕೆಲವು ನಿರ್ದೇಶಕರು ನನ್ನ ಹೋರಾಟ ನೋಡಿ ನಿಮ್ಮ ವಿಚಾರಧಾರೆ ತುಂಬ ಇಷ್ಟವಾಯ್ತು. ಹಾಗಾಗಿ ನೀವು ಮಾಡುವಂಥ ಚಿತ್ರ ಇದೆ ಎಂದು ನನ್ನ ಬಳಿಗೆ ಬಂದಿದ್ದೂ ಇದೆ. ಒಬ್ಬ ವ್ಯಕ್ತಿಯ ಬಗ್ಗೆ ಹೆಚ್ಚು ಗೊತ್ತಾದಷ್ಟು ಅದರಲ್ಲಿ ಪ್ಲಸ್ ಮೈನಸ್ ಎರಡೂ ಕಾಣಿಸುತ್ತಾ ಹೋಗುತ್ತವೆ. ಅದು ಅವರವರ ದೃಷ್ಟಿಕೋನಕ್ಕೆ ಕಂಡಂತೆ ಇರುತ್ತದೆ.

ನಿಮ್ಮ ನಿರ್ದೇಶನದ ಕನಸು ಏನಾಯಿತು?

ನನ್ನ ಪ್ರಕಾರ ಒಂದು ಸಿನಿಮಾ ಗೆಲ್ಲೋದು, ಸೋಲೋದು ಏನೇ ಇದ್ದರೂ ಅದು ನಿರ್ದೇಶಕರಿಂದ ಮಾತ್ರ. ಕಲಾವಿದರು ಏನೇ ಇದ್ದರು ನಿರ್ದೇಶಕರ ಕೈಗೊಂಬೆಗಳು ಅಷ್ಟೇ. ನಾಯಕರಿಂದ ಚಿತ್ರಕ್ಕೆ ಸ್ಟಾರ್ ವ್ಯಾಲ್ಯು, ಕಮರ್ಷಿಯಲ್ ವ್ಯಾಲ್ಯು ಸಿಗಬಹುದೇನೋ. ಆದರೆ ನಿರ್ದೇಶಕರೇ ಅಡಿಪಾಯ ನಮ್ಮ ಇಂಡಸ್ಟ್ರಿಗೆ. ಅದೇ ಕಾರಣಕ್ಕೆ ನನಗೆ ನಿರ್ದೇಶನ ಎಂದರೆ ವಿಶೇಷ ಅಭಿಮಾನ. ಆದರೆ ಫೀಲ್ಢಿಗೆ ಎಂಟ್ರಿಯಾಗುತ್ತಿದ್ದ ಹಾಗೆ ಇದು ಒಂದು ಸಮುದ್ರ ಎಂದು ಅರ್ಥವಾಯಿತು. ಇದನ್ನು ಅರ್ಥ ಮಾಡಬೇಕು ಎಂದರೆ ಈ ಸಮುದ್ರದೊಳಗೆ ನಾನು ಮುಳುಗಬೇಕು. ಅದು ಬಿಟ್ಟು ಹೋರಾಟ ಮಾಡ್ತೀನಿ, ಹೀರೋ ಆಗಿ ಮಾಡುತ್ತೀನಿ, ಡೈರೆಕ್ಷನೂ ಮಾಡ್ತೀನಿ ಅಂದರೆ ಕಷ್ಟ. ಹಾಗಾಗಿ ಈಗಾಗಲೇ ಸಾಕಷ್ಟು ಮಂದಿ ಪ್ರತಿಭಾವಂತರು ಇದ್ದಾರೆ. ಅವರಿಗೆ ಬೆಂಬಲ ನೀಡಬಹುದೇ ಹೊರತು ಸದ್ಯಕ್ಕೆ ನಿರ್ದೇಶನದಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ.

ಮದುವೆಯ ಬಳಿಕ ನಿಮ್ಮಲ್ಲಿ ಆಗಿರುವ ಬದಲಾವಣೆ ಏನು?

ಮದುವೆಯ ಬಳಿಕ ಕೊರೊನಾ ಬಂತು. ಆರು ತಿಂಗಳಿನಿಂದ ಮನೆಯಿಂದ ಹೊರಗೆ ಹೋಗಿಲ್ಲ. ಮದುವೆ ಆಗಿರದಿದ್ದರೆ ಹೀಗೆ ಮನೆಯಲ್ಲೇ ಇರುವುದು ಅಂದರೆ ತುಂಬ ಕಷ್ಟವಾಗಿರುತ್ತಿತ್ತು. ನನ್ನ ಪತ್ನಿ ಸ್ಕ್ರಿಪ್ಟ್ ವಿಷಯಗಳಲ್ಲಿಯೂ ಸಹಾಯ ಮಾಡಬಲ್ಲಳು. ಆಕೆಯೂ ಹೋರಾಟಗಾರ್ತಿಯೇ. ಒಂದೇ ವೇವ್ ಲೆಂತ್ ಇರುವುದರಿಂದ ಬಹಳ ಅರ್ಥ ಮಾಡಿಕೊಂಡಿದ್ದೇವೆ. ಆದರೆ ಸದ್ಯಕ್ಕೆ ಜತೆಯಾಗಿ ಹೆಚ್ಚು ಹೆಚ್ಚು ಸಾಮಾಜಿಕವಾಗಿ ಬೆರೆಯಲು ಸಾಧ್ಯವಾಗುತ್ತಿಲ್ಲ ಎನ್ನುವುದು ಮಾತ್ರ ಬೇಸರವಾಗಿದೆ.

This Article Has 2 Comments
  1. Pingback: DevOps Company

  2. Pingback: Regression Testing

Leave a Reply

Your email address will not be published. Required fields are marked *

Translate »
error: Content is protected !!