ಸಿನಿಮಾ ಮಾಡೋದೇ ಒಂದು ಸವಾಲು. ಇನ್ನೂ ಸಿನಿಮಾವನ್ನು ಥಿಯೇಟರ್ ಗೆ ತಂದು ನಿಲ್ಲಿಸೋದು ಎಲ್ಲದಕ್ಕಿಂತ ದೊಡ್ಡ ಸವಾಲು. ಅದಕ್ಕಾಗಿ ಚಿತ್ರತಂಡಗಳು ನಾನಾ ಬಗೆಯಲ್ಲಿ ಪ್ರಮೋಷನ್ ಮಾಡ್ತಾವೆ. ಆದ್ರೆ ಹೊಂದಿಸಿ ಬರೆಯಿರಿ ಸಿನಿಮಾ ಟೀಂ ಸಾಮಾಜಿಕ ಕಳಕಳಿ ಮೆರೆಯುವ ಮೂಲಕ ಪ್ರಚಾರ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ಪರಿಸರ ದಿನದ ಅಂಗವಾಗಿ ಬಿ ಎನ್ ಎಂಐಟಿ ಕಾಲೇಜ್ ವತಿಯಿಂದ ಇತ್ತೀಚೆಗಷ್ಟೇ ಸೈಕಲ್ ಜಾಥಾದ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರವೀಣ್ ತೇಜ್ , ನವೀನ್ ಶಂಕರ್ , ಐಶಾನಿ ಶೆಟ್ಟಿ, ಸಂಯುಕ್ತ ಹೊರನಾಡು, ಭಾವನಾ ರಾವ್, ಅರ್ಚನಾ ಜೋಯಿಸ್, ಅನಿರುದ್ಧ್ ಆಚಾರ್ಯ , ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಪರಿಸರ ಉಳಿವಿಗಾಗಿ ಬೈಸಿಕಲ್ ಚಲಾಯಿಸಿ ಜಾಗೃತಿ ಮೂಡಿಸಿದರು.
ಇನ್ನೂ ಇದೇ ಭಾನುವಾರ ಹಮ್ಮಿಕೊಳ್ಳಲಾಗಿರುವ We Run for cause ಎಂಬ ಮ್ಯಾರಾಥಾನ್ ನಲ್ಲಿಯೂ ಹೊಂದಿಸಿ ಬರೆಯಿರಿ ಸಿನಿಮಾ ತಂಡ ಭಾಗಿಯಾಗಲಿದೆ. ಈ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಹೊಂದಿಸಿ ಬರೆಯಿರಿ ಬಳಗ ಕೈ ಜೋಡಿಸಿದೆ.
ಜೂನ್ 24ಕ್ಕೆ ಮೊದಲ ಹಾಡು ರಿಲೀಸ್
ಟೀಸರ್ ಮೂಲಕ ಈಗಾಗಲೇ ಹೊಸ ಭರವಸೆ ಹುಟ್ಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾದ ಮೊದಲ ಹಾಡು, ಇದೇ ತಿಂಗಳ 24ಕ್ಕೆ ಬಿಡುಗಡೆಯಾಗಲಿದೆ. ಕಾಲೇಜ್ ಫ್ರೊಫೆಸರ್ ಆಗಿದ್ದ ರಾಮೇನಹಳ್ಳಿ ಜಗನ್ನಾಥ ಹೊಂದಿಸಿ ಬರೆಯಿರಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ವಿದ್ಯಾರ್ಥಿ ಜೀವನ, ಕಾಲೇಜು ನಂತರದ ಜೀವನದ ಏರಿಳಿತದ 12ವರುಷಗಳ ಸುದೀರ್ಘ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀಮಹದೇವ್, ಭಾವನಾರಾವ್ ಸಂಯುಕ್ತ ಹೊರನಾಡು, ಐಶಾನಿ ಶೆಟ್ಟಿ, ಅರ್ಚನಾ ಜೋಯಿಸ್, ಅನಿರುದ್ದ್ ಆಚಾರ್ಯ ಸೇರಿದಂತೆ ಹಲವು ಪ್ರತಿಭೆಗಳು ನಟಿಸಿದ್ದಾರೆ.
ಈಗಾಗಲೇ ಹೊಂದಿಸಿ ಬರೆಯಿರಿ ಸಿನಿಮಾದ ಶೂಟಿಂಗ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ.. ಟಗರು ಖ್ಯಾತಿಯ ಮಾಸ್ತಿ, ಪೊಗರು ಖ್ಯಾತಿಯ ಪ್ರಶಾಂತ್ ರಾಜಪ್ಪ ಹಾಗೂ ಜಗನ್ನಾಥ್ ಸೇರಿದಂತೆ ಮೂವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಗುಳ್ಟು’ ಚಿತ್ರಕ್ಕೆ ಸಿನಿಮಾಟೋಗ್ರಫಿ ಮಾಡಿದ್ದ ಶಾಂತಿ ಸಾಗರ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಜೋ ಕೋಸ್ಟ ಸಂಗೀತ, ಕೆ ಕಲ್ಯಾಣ್, ಹೃದಯಶಿವ ಹಾಗೂ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ದೊಡ್ಡ ತಾರಾಬಳಗವೇ ನಟಿಸಿರುವ ಹೊಂದಿಸಿ ಬರೆಯಿರಿ ಸಿನಿಮಾವನ್ನು ಸಂಡೇ ಸಿನಿಮಾಸ್ ಬ್ಯಾನರ್ ನಡಿ ರಾಮೇನಹಳ್ಳಿ ಜಗನ್ನಾಥ್ ಹಾಗೂ ಸ್ನೇಹಿತರು ನಿರ್ಮಾಣ ಮಾಡಿದ್ದಾರೆ.
Be the first to comment