ಚಿತ್ರ ವಿಮರ್ಶೆ : ಇಲ್ಲಿ ಮೆಕೀಂಗ್ ಶೈಲಿಯೊಂದೆ ಹೀರೋ

ಚಿತ್ರ: ಹೀರೋ
ಪಾತ್ರವರ್ಗ: ರಿಷಬ್​ ಶೆಟ್ಟಿ, ಗಾನವಿ ಲಕ್ಷ್ಮಣ್​, ಪ್ರಮೋದ್​ ಶೆಟ್ಟಿ, ಉಗ್ರಂ ಮಂಜು ಮುಂತಾದವರು
ನಿರ್ದೇಶನ: ಎಂ. ಭರತ್​ ರಾಜ್​
ನಿರ್ಮಾಣ: ರಿಷಬ್​ ಶೆಟ್ಟಿ

ರೇಟಿಂಗ್ : 3.5/5

ನಾಯಕನ ಜೊತೆ ಬ್ರೇಕಪ್​ ಮಾಡಿಕೊಂಡ ಬಳಿಕ ಡಾನ್​ ಒಬ್ಬನ ಜೊತೆ ನಾಯಕಿ ಮದುವೆ ಮಾಡಿಕೊಂಡಿದ್ದಾಳೆ. ಈಗ ಆ ಡಾನ್​ನ ಮನೆಗೆ ನುಗ್ಗಿ ಮಾಜಿ ಪ್ರೇಯಸಿಯನ್ನೇ ಸಾಯಿಸಬೇಕು ಎಂಬ ಉದ್ದೇಶ ನಾಯಕನದ್ದು! ಡಾನ್​ನ ಮನೆಗೆ ಕಾಲಿಡುವ ಹೀರೋಗೆ ಅಚ್ಚರಿ ಕಾದಿರುತ್ತದೆ. ಮುಂದೇನಾಗುತ್ತೆ? ನಾಯಕನ ಕೆಲಸ ಈಡೇರುತ್ತಾ? ಅದನ್ನು ತಿಳಿದುಕೊಳ್ಳೋಕೆ ಪೂರ್ತಿ ಸಿನಿಮಾ ನೋಡಬೇಕು.

ಮೊದಲಿನಿಂದಲೂ ಕ್ಲಾಸ್​ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಸಿನಿಮಾಗಳನ್ನೇ ರಿಷಬ್​ ಶೆಟ್ಟಿ ಆಯ್ಕೆ ಮಾಡಿಕೊಳ್ಳುತ್ತ ಬರುತ್ತಿದ್ದಾರೆ. ಅದೇ ಸಾಲಿನ ಇನ್ನೊಂದು ಡಿಫರೆಂಟ್​ ಪ್ರಯತ್ನವೇ ‘ಹೀರೋ’ ಚಿತ್ರ. ಆದರೆ ಎಲ್ಲರಿಗೂ ಈ ಹೀರೋ ಇಷ್ಟವಾಗುತ್ತಾನೆ ಎನ್ನೋಕಾಗಲ್ಲ. ಹೀರೋ ಎಂದ ಮಾತ್ರಕ್ಕೆ ಇವನು ಕಮರ್ಷಿಯಲ್​ ಸಿನಿಮಾಗಳ ಟಿಪಿಕಲ್​ ನಾಯಕನಲ್ಲ. ತಾನೇ ಪೇಚಿಗೆ ಸಿಲುಕಿಕೊಳ್ಳುತ್ತಾ ಪ್ರೇಕ್ಷಕರನ್ನು ರಂಜಿಸುವ ವ್ಯಕ್ತಿತ್ವ ಈತನದ್ದು. ಇನ್ನೇನು ಫೈಟ್​ ಮಾಡುತ್ತಾನೆ ಎಂದುಕೊಳ್ಳುವಾಗ ಈತ ನಗಿಸುತ್ತಾನೆ. ನಗಿಸಬಹುದು ಎಂದುಕೊಳ್ಳುವಾಗಲೇ ಫೈಟ್​ ಮಾಡಿಬಿಡುತ್ತಾನೆ. ಹಾಗಾಗಿ ತಾವು ನಿರೀಕ್ಷಿಸಿದ್ದು ಹುಸಿ ಆಯಿತು ಎಂದುಕೊಂಡು ಬೇಸರಪಟ್ಟುಕೊಳ್ಳಬೇಕೋ ಅಥವಾ ನಿರೀಕ್ಷೆಗೂ ಮೀರಿ ಬೇರೇನೋ ಆಯಿತು ಎಂದು ಖುಷಿಪಡಬೇಕೂ ಎಂಬುದು ಪ್ರೇಕ್ಷಕರಿಗೆ ಬಿಟ್ಟಿದ್ದು.

ಇದೊಂದು ಕಾಮಿಡಿ ಸಿನಿಮಾ. ಇದರಲ್ಲಿ ಪ್ರೇಕ್ಷಕರು ಹೆಚ್ಚಿನ ಲಾಜಿಕ್​ ಬಯಸೋದು ಕಷ್ಟ. ಆದರೆ ಕೆಲವು ಥ್ರಿಲ್ಲಿಂಗ್​ ದೃಶ್ಯಗಳಲ್ಲೂ ಕೂಡ ನಿರ್ದೇಶಕರು ಲಾಜಿಕ್​ಗೆ ಕಿಂಚಿತ್ತೂ ಗಮನ ನೀಡದೇ ಇರುವುದು ಎದ್ದು ಕಾಣುತ್ತದೆ. ಮರುಕ್ಷಣವೇ ಎದುರಾಗುವ ಹಾಸ್ಯದ ದೃಶ್ಯಗಳನ್ನು ನೋಡಿಕೊಂಡು ಲಾಜಿಕ್​ ಕೊರತೆಯನ್ನು ಮರೆಯಬೇಕಷ್ಟೇ. ಇಂಥ ಕೊರತೆಗಳ ಕಡೆಗೆ ನಿರ್ದೇಶಕರು ಹೆಚ್ಚಿನ ಗಮನ ಹರಿಸಿದ್ದಿದ್ದರೆ ಚಿತ್ರದ ತೂಕ ಹೆಚ್ಚುವ ಸಾಧ್ಯತೆ ಇತ್ತು.

ಕಿರುತೆರೆಯಲ್ಲಿ ಜನಪ್ರಿಯವಾಗಿದ್ದ ನಟಿ ಗಾನವಿ ಲಕ್ಷ್ಮಣ್​ ಅವರು ‘ಹೀರೋ’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಹೀರೋಯಿನ್​ ಪಟ್ಟಕ್ಕೆ ಬಡ್ತಿ ಪಡೆದುಕೊಂಡಿದ್ದಾರೆ. ಮೊದಲ ಸಿನಿಮಾದಲ್ಲಿಯೇ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿದೆ. ತಮ್ಮ ಪಾಲಿಗೆ ಬಂದ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ನೋವು, ಹತಾಶೆ, ಕೋಪ ಮುಂತಾದ ಭಾವಗಳನ್ನು ವ್ಯಕ್ತಪಡಿಸುವಲ್ಲಿ ಅವರು ಗೆದ್ದಿದ್ದಾರೆ. ನಟನೆಗೆ ಮಹತ್ವ ಇರುವ ಪಾತ್ರಗಳನ್ನು ತಾವು ಸಮರ್ಥವಾಗಿ ನಿಭಾಯಿಸಬಲ್ಲೆ ಎಂಬ ಸಂದೇಶವನ್ನು ಗಾನವಿ ಈ ಸಿನಿಮಾ ಮೂಲಕ ಸಾರಿದ್ದಾರೆ.

ಪ್ರಮೋದ್, ಉಗ್ರಂ ಮಂಜು, ರಿಷಬ್​ ಜುಲಗ್​ಬಂದಿ
‘ಬೆಲ್​ ಬಾಟಂ’ ಚಿತ್ರದ ದಿವಾಕರನ ರೀತಿಯೇ ಕೆಲವೊಮ್ಮೆ ಪೆದ್ದುಪೆದ್ದಾಗಿ ಆಡುತ್ತಲೇ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ ರಿಷಬ್​ ಶೆಟ್ಟಿ. ಇರುವ ಕೆಲವೇ ಪಾತ್ರಗಳ ನಡುವೆ ಪ್ರಮೋದ್​ ಶೆಟ್ಟಿ ಕೂಡ ಹೈಲೈಟ್​ ಆಗಿದ್ದಾರೆ. ಅವರು ಕೆಲವೇ ಹೊತ್ತು ಪರದೆ ಮೇಲೆ ಕಾಣಿಸಿಕೊಂಡರೂ ಕೂಡ ಎಂದಿನ ಚಾರ್ಮ್​ನಲ್ಲಿ ಗಮನ ಸೆಳೆಯುತ್ತಾರೆ. ‘ಉಗ್ರಂ’ ಮಂಜು ಅವರಿಗೆ ಸಿಕ್ಕಿರುವ ಸ್ಕ್ರೀನ್​ ಸ್ಪೇಸ್​ ಕಡಿಮೆ. ಹೆಚ್ಚೇನೂ ಮಾತುಕತೆ ಇಲ್ಲದ ವಿಲನ್​ ಪಾತ್ರದಲ್ಲಿ ಅವರು ಅಬ್ಬರಿಸುವ ಪ್ರಯತ್ನ ಮಾಡಿದ್ದಾರೆ. ಇನ್ನುಳಿದ ಕೆಲವು ಸಣ್ಣ-ಪುಟ್ಟ ಪಾತ್ರಗಳು ನಗು ಉಕ್ಕಿಸುತ್ತವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!