ಭೂಗತ ಲೋಕದ ಡಾನ್ ಆಗಿದ್ದ ಎಂ ಪಿ ಜಯರಾಜ್ ಕುರಿತ ಧನಂಜಯ ನಟನೆಯ ‘ಹೆಡ್ಬುಷ್’ ಸಿನಿಮಾಕ್ಕೆ ಜಯರಾಜ್ ಪುತ್ರ ಅಜಿತ್ ಜಯರಾಜ್ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾ ಬೆಂಗಳೂರು ಭೂಗತ ಲೋಕದ ಮೊದಲ ಡಾನ್ ಎನ್ನಲಾಗುವ ಜಯರಾಜ್ ಕತೆಯನ್ನು ಒಳಗೊಂಡಿದೆ. ತಮ್ಮ ತಂದೆಯ ಕತೆಯ ಸಿನಿಮಾ ಮಾಡಬಾರದು ಎಂದು ಅವರು ಕರ್ನಾಟಕ ಫಿಲ್ಮ್ ಛೇಂಬರ್ಗೆ ದೂರು ನೀಡಿದ್ದಾರೆ.
“ನಮ್ಮ ತಂದೆಯ ಕಥೆಯನ್ನು ಯಾರೂ ಸಿನಿಮಾ ಮಾಡಬಾರದು. ಈ ಬಗ್ಗೆ ಕಾನೂನು ಹೋರಾಟಕ್ಕೂ ಸಜ್ಜಾಗುತ್ತೇನೆ. ಕಾನೂನು ಪ್ರಕಾರವೇ ಪ್ರಕರಣವನ್ನು ಎದುರಿಸುತ್ತೇನೆ” ಎಂದು ಅಜಿತ್ ಜಯರಾಜ್ ಹೇಳಿದ್ದಾರೆ.
“ಹೆಡ್ ಬುಷ್ ನಮ್ಮ ತಂದೆಯವರ ಕತೆಯನ್ನು ಆಧರಿಸಿದೆ ಎಂದು ತಿಳಿದುಬಂದಿದೆ. ಚಿತ್ರೀಕರಣಕ್ಕೂ ಮುನ್ನ ತಂಡದೊಂದಿಗೆ ಮಾತನಾಡಿದ್ದೆ. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಚೇಂಬರ್ಗೆ ದೂರು ನೀಡಿದ್ದೇನೆ. ಚಿತ್ರತಂಡದವರು ವೈಯಕ್ತಿಕ ಜೀವನಕ್ಕೆ ನೋವಾಗುವಂತೆ ನಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ನನ್ನ ವೈಯಕ್ತಿಕ ಹಕ್ಕುಗಳಿಗೆ ಇದರಿಂದ ತೊಂದರೆಯಾಗುತ್ತಿದೆ” ಎಂದಿದ್ದಾರೆ.
ಹೆಡ್ ಬುಷ್ ಚಿತ್ರ ಇತ್ತೀಚೆಗಷ್ಟೇ ಚಿತ್ರೀಕರಣ ಪೂರ್ಣಗೊಳಿಸಿದೆ. ಶೂನ್ಯ ನಿರ್ದೇಶನದ ‘ಹೆಡ್ ಬುಷ್’ ಚಿತ್ರಕ್ಕೆ ಅಗ್ನಿ ಶ್ರೀಧರ್ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದಾರೆ. ಧನಂಜಯ ಅವರೊಂದಿಗೆ ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಹಲವು ತಾರೆಯರು ಬಣ್ಣ ಹಚ್ಚಿದ್ದಾರೆ.
ಚಿತ್ರ ಹಲವು ಭಾಷೆಗಳಲ್ಲಿ ತಯಾರಾಗುತ್ತಿದ್ದು, ಇದು 1970ರ ಕಾಲದ ಬೆಂಗಳೂರಿನಲ್ಲಿ ನಡೆದ ಭೂಗತ ಲೋಕದ ಕತೆ ಹೊಂದಿದೆ. ಜಯರಾಜ್ ಪಾತ್ರದಲ್ಲಿ ಧನಂಜಯ ನಟಿಸುತ್ತಿದ್ದಾರೆ.
ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೊ ಸೋಮಣ್ಣ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ, ಸುನೊಜ್ ವೇಲಾಯಧನ್ ಛಾಯಾಗ್ರಹಣವಿದೆ. ಬಾದಲ್ ನಂಜುಂಡಸ್ವಾಮಿ ಕಲಾ ನಿರ್ದೇಶನ ಮಾಡಿದ್ದಾರೆ.
____
Be the first to comment