ಮಾಜಿ ಮುಖ್ಯಮಂತ್ರಿ, ನಿರ್ಮಾಪಕ ಎಚ್ ಡಿ ಕುಮಾರಸ್ವಾಮಿ ಮತ್ತೆ ಎಸ್ ನಾರಾಯಣ್ ನಿರ್ದೇಶನದಲ್ಲಿ ಸಿನಿಮಾ ಮಾಡಲು ಮುಂದಾಗಿದ್ದು ಈ ಸಿನೆಮಾದ ತಾರಾಗಣದ ಬಗ್ಗೆ ಕುತೂಹಲ ಮೂಡಿದೆ.
ವ್ಯಾಸರಾಯ ಬಲ್ಲಾಳ ಅವರ ಕಾದಂಬರಿ ಆಧರಿಸಿದ ಸಿನಿಮಾ ದಶಕದ ಹಿಂದೆ ತೆರೆಗೆ ಬರಬೇಕಾಗಿತ್ತು. ಆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಸಿಎಂ ಆದ ಕಾರಣ ಸಿನಿಮಾ ತಯಾರಿ ಅರ್ಧಕ್ಕೆ ನಿಂತಿತು. ಕಮಲಹಾಸನ್, ಐಶ್ವರ್ಯ ರೈ ಅವರನ್ನು ಹಾಕಿಕೊಂಡು ಚಿತ್ರ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು ಈಗ ಮತ್ತೆ ಚೆನ್ನಾಂಬಿಕ ಫಿಲಂಸ್ ನಿಂದ ಚಿತ್ರ ನಿರ್ಮಾಣ ಮಾಡಲು ಕುಮಾರಸ್ವಾಮಿ ಮುಂದಾಗಿರುವುದು ಚರ್ಚೆಗೆ ಕಾರಣವಾಗಿದೆ.
“ಈಗ ಮತ್ತೆ ಹಳೆಯ ಕಮಿಟ್‌ಮೆಂಟ್‌ಗೆ ಮರು ಚಾಲನೆ ಸಿಕ್ಕಿದೆ. ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಿದೆ. ಚಿತ್ರ ನಿರ್ಮಾಣ ಸಂಬಂಧ ಕುಮಾರಸ್ವಾಮಿ ಅವರ ಜೊತೆ ಚರ್ಚೆ ಆಗಿದೆ. ಆದರೆ ನಾಯಕ, ನಾಯಕಿ ಸೇರಿದಂತೆ ತಾರಾಗಣವನ್ನು ಅಂತಿಮ ಮಾಡಿಲ್ಲ. ಕುಮಾರಸ್ವಾಮಿ ಅವರು ನಿರ್ಮಾಪಕರು ಆಗಿರುವ ಕಾರಣ ದೊಡ್ಡ ಮಟ್ಟದಲ್ಲಿ ಸಿನಿಮಾ ಇರುತ್ತದೆ. ದೊಡ್ಡ ಕಲಾವಿದರೇ ಚಿತ್ರದಲ್ಲಿ ನಟಿಸಲಿದ್ದಾರೆ” ಎಂದು ಎಸ್ ನಾರಾಯಣ್ ತಿಳಿಸಿದ್ದಾರೆ.
ಈ ಹಿಂದೆ ಕುಮಾರಸ್ವಾಮಿ ಅವರು ವಿಷ್ಣುವರ್ಧನ್ ನಟನೆಯ ‘ಸೂರ್ಯವಂಶ’, ಶ್ರೀಮುರಳಿ ನಟನೆಯ ‘ಚಂದ್ರ ಚಕೋರಿ’, ಶಿವರಾಜ್ ಕುಮಾರ್ ನಟನೆಯ ‘ಗಲಾಟೆ ಅಳಿಯಂದ್ರು’ ಸಿನಿಮಾ ನಿರ್ಮಿಸಿದ್ದರು. ಈ ಮೂರೂ ಚಿತ್ರಗಳಿಗೆ ನಾರಾಯಣ್ ನಿರ್ದೇಶನ ಮಾಡಿದ್ದರು.
_________

Be the first to comment