ಹಳ್ಳಿ ಹೈದ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟ್ರೋಫಿ ಗೆದ್ದ ಮೊದಲ ಸ್ಪರ್ಧಿ ಎಂದು ದಾಖಲೆ ಬರೆದಿದ್ದಾರೆ.
ಬರೋಬ್ಬರಿ 5 ಕೋಟಿ ವೋಟ್ ಪಡೆದು ಹನುಮಂತ ಅವರು ಟ್ರೋಫಿ ಗೆದ್ದು ಬೀಗಿದ್ದಾರೆ. ಬಿಗ್ ಬಾಸ್ ಆಟ ಶುರುವಾಗಿ 4 ವಾರ ಕಳೆದ ಮೇಲೆ ದೊಡ್ಮನೆಗೆ ಹನುಮಂತ ಕಾಲಿಟ್ಟಿದ್ದರು. ಪ್ರತಿ ಸ್ಪರ್ಧಿ ತ್ರಿವಿಕ್ರಮ್ನ್ನು ಹಿಂದಿಕ್ಕಿ ಹನುಮಂತು ಬಿಗ್ ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ.
ಟ್ರೋಫಿ ಗೆದ್ದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಹನುಮಂತ, ‘ದೇವರಾಣೆ ನಾನು ಗೆಲ್ಲುತ್ತೇನೆ ಅಂತ ಬಿಗ್ ಬಾಸ್ ಮನೆಗೆ ಬಂದಿರಲಿಲ್ಲ. ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ. ನಾನು ಗೆಲ್ತೀನಿ ಅಂತ ಗೊತ್ತಿದ್ದರೆ ಬಾಯಿ ಪಾಠ ಮಾಡಿಕೊಂಡು ಬರುತ್ತಿದ್ದೆ. ಆದರೆ ಈಗ ಏನು ಮಾತನಾಡಬೇಕು ಅಂತ ಗೊತ್ತಾಗುತ್ತಿಲ್ಲ. ದೇವರು, ಸುದೀಪ್ ಸರ್, ಕನ್ನಡ ನಾಡಿನ ಜನರ ಆಶೀರ್ವಾದದಿಂದ ನಾನು ಗೆದ್ದಿದ್ದಿದ್ದೇನೆ’ ಎಂದು ಹೇಳಿದರು.
ತ್ರಿವಿಕ್ರಮ್ ಅವರು ರನ್ನರ್ಅಪ್ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ. ತ್ರಿವಿಕ್ರಮ್ ಅವರು ಬಿಗ್ ಬಾಸ್ ಆಟದಲ್ಲಿ ನಿರೀಕ್ಷೆ ಮೂಡಿಸಿದ್ದರು. ಮಧ್ಯಮವರ್ಗದ ಹುಡುಗ ಎಂಬ ಕಾರಣಕ್ಕೆ ಅವರು ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು. ಬಿಗ್ ಬಾಸ್ ವೇದಿಕೆ ಸಿಕ್ಕಿದ್ದಕ್ಕೆ ಅವರು ತುಂಬ ಖುಷಿ ಆಗಿದ್ದರು. ಈ ಶೋ ಗೆಲ್ಲಲೇಬೇಕು ಎಂದು ಅವರು ಸಾಕಷ್ಟು ಶ್ರಮಪಟ್ಟಿದ್ದರು. ಆದರೆ ಕೊನೆಗೆ ರನ್ನರ್ ಅಪ್ ಪಟ್ಟಕ್ಕೆ ತೃಪ್ತಿಪಟ್ಟುಕೊಂಡರು. ವೈಲ್ಡ್ ಕಾರ್ಡ್ ಮೂಲಕ 50ನೇ ದಿನದಲ್ಲಿ ಬಂದಿದ್ದ ರಜತ್ ಅವರು ಎರಡನೇ ರನ್ನರ್ ಅಪ್ ಆದರು.
ಭಾನುವಾರದ ಸಂಚಿಕೆ ಸುದೀಪ್ ಅವರ ಕೊನೆಯ ಬಿಗ್ ಬಾಸ್ ಸಂಚಿಕೆಯಾಗಿದ್ದುಬಿಗ್ ಬಾಸ್, ಕಿಚ್ಚನ ಬಗ್ಗೆ ಗೌರವಪೂರ್ವಕ ನುಡಿಯನ್ನಾಡಿದರು. ಬಿಗ್ ಬಾಸ್ ನಿರೂಪಕರಾಗಿ ಸತತ 11 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಸುದೀಪ್ ಅವರು ಕೊನೆ ಸೀಸನ್‌ನಲ್ಲಿ ಐದು ನಿಮಿಷ ಪ್ರೇಕ್ಷಕರಾದರು. ಇತ್ತೀಚೆಗೆ ವಿಧಿವಶರಾದ ಸುದೀಪ್ ಅವರ ತಾಯಿಯನ್ನು ವೇದಿಕೆಯಲ್ಲಿ ಸ್ಮರಿಸಲಾಯಿತು. ಸುದೀಪ್ ಅವರಿಗೆ ಫ್ಯಾಮಿಲಿ ಫೋಟೊ ಫ್ರೇಮ್ ಗಿಫ್ಟ್ ನೀಡಲಾಯಿತು. ವಿಶೇಷ ಕೊಡುಗೆ ನೀಡಿದ ಬಿಗ್ ಬಾಸ್ ತಂಡಕ್ಕೆ ಸುದೀಪ್ ಕೃತಜ್ಞತೆ ಸಲ್ಲಿಸಿದರು.

Be the first to comment