ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು 75ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭ ಚಿತ್ರನಿರ್ದೇಶಕರಾಗಿ ಬಡ್ತಿ ಹೊಂದುತ್ತಿದ್ದಾರೆ.
ಸಾಮಾಜಿಕ ಪಿಡುಗು ಆಗಿರುವ ಭ್ರೂಣಹತ್ಯೆ ಕಥೆಯನ್ನಾಧರಿಸಿರುವ ಹಂಸಲೇಖ ಅವರ ‘ಓಕೆ’ ಚಲನಚಿತ್ರ ಚಿತ್ರೀಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಚಾಲನೆ ನೀಡಿದರು. ಹಂಸಲೇಖ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು ಸಿದ್ದರಾಮಯ್ಯ ಸಿಹಿ ತಿನ್ನಿಸಿ ನೂತನ ಸಿನಿಮಾಗೆ ಶುಭ ಕೋರಿದರು.
‘ನಾಡು ಕಂಡ ಅಪರೂಪದ ಸಂಗೀತಗಾರ, ಸಂಗೀತ ನಿರ್ದೇಶಕ, ಸಾವಿರಾರು ಯುವಕರನ್ನು ಬೆಳೆಸಿರುವ ಹಂಸಲೇಖ ಅವರು 75ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಸಂದರ್ಭ ಚಿತ್ರನಿರ್ದೇಶಕರಾಗಿ ಬಡ್ತಿ ಹೊಂದುತ್ತಿರುವುದು ಸಂತಸದ ವಿಷಯ. ಅವರ ಓಕೆ ಚಿತ್ರಕ್ಕೆ ಶುಭವಾಗಲಿ. ಚಿತ್ರ ನಿರ್ದೇಶಕರಾಗಿಯೂ ಹೆಸರು ಗಳಿಸಲಿ’ ಎಂದು ಸಿದ್ದರಾಮಯ್ಯ ಶುಭ ಹಾರೈಸಿದರು.
‘ನಾನು ನಿರ್ದೇಶಕನಾಗಬೇಕು ಅಂತಲೇ ಉದ್ಯಮಕ್ಕೆ ಬಂದೆ. ಆದರೆ ನಿರ್ದೇಶಕ ಆಗುವ ಬದಲು ಬೇರೆಯವರಿಗೆ ಬೆಂಬಲ ನೀಡುತ್ತಾ, ಅವರನ್ನು ಮೇಲೆ ತರುವ ಪ್ರಯತ್ನದಲ್ಲಿ ಮುಳುಗಿದೆ. ನಿರ್ದೇಶಕನಾಗುವ ಕನಸು ಈಡೇರದೆಯೇ ನನ್ನ ಬದುಕು ಮುಗಿಯಿತೇನೋ ಎಂದುಕೊಂಡಿದ್ದೆ. ಆದರೆ ಈ ಚಂದನವನ ನನ್ನ ಕನಸನ್ನು ಇಂದು ನನಸಾಗಿಸುತ್ತಿದೆ’ ಎಂದು ಹಂಸಲೇಖ ಹೇಳಿದ್ದಾರೆ.





Be the first to comment