ಸ್ಟಾರ್ ಸುವರ್ಣ ವಾಹಿನಿಯ ಹಳ್ಳಿ ಹೈದ ಪ್ಯಾಟೇಗ್ ಬಂದ ಕಾರ್ಯಕ್ರಮ ಸೆ.24ರಂದು ಶುರುವಾಗಲಿದ್ದು, ಹೊಸತನದೊಂದಿಗೆ ರಿಯಾಲಿಟಿ ಶೋ ಮೂಡಿಬರುತ್ತಿದೆ. ಈ ಬಾರಿ 12 ಹಳ್ಳಿ ಹುಡುಗರು ಕನಸುಗಳನ್ನು ನನಸು ಮಾಡಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬರುತ್ತಿದ್ದಾರೆ.
ಸೆ.23ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ನಟಿ ಮಾಲಾಶ್ರೀ, ಹರಿಪ್ರಿಯಾ ಮತ್ತು ಐಂದ್ರಿತಾ ರೇ ಬರಮಾಡಿಕೊಳ್ಳಲಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಿಂದ ಬಂದಿರುವ 12 ಹಳ್ಳಿ ಹುಡುಗರನ್ನು ಆಯಾ ಊರಿನ ಜನ ಅದ್ದೂರಿಯಾಗಿ ಮೆರವಣಿಗೆ ಮೂಲಕ ಬೀಳ್ಕೊಟ್ಟು ಆಶೀರ್ವದಿಸಿ ಕಳುಹಿಸಿದರು.
ತಂತ್ರಜ್ಞಾನದ ಬಳಕೆಯಿಂದಾಗಿ ಹಳ್ಳಿ ಮತ್ತು ಪಟ್ಟಣದ ನಡುವಿನ ಅಂತರ ಮೊದಲಿನಂತಿಲ್ಲ. ಈ ಬಾರಿ ಹಳ್ಳಿ ಹುಡುಗರನ್ನು ಪ್ಯಾಟೆ ಹುಡುಗರನ್ನಾಗಿಸುವ ಬದಲು, ಅವರ ಕನಸುಗಳನ್ನು ಪೋಷಿಸಲು ಸ್ಟಾರ್ ಸುವರ್ಣ ವಾಹಿನಿ ಮುಂದಾಗಿದೆ. ಈ ನಿಟ್ಟಿನಲ್ಲಿ ಹಳ್ಳಿ ಹುಡುಗರು ಪ್ಯಾಟೆಗೆ ಬರಲಿದ್ದು, ಇಲ್ಲಿನ ಸವಾಲುಗಳನ್ನು ಎದುರಿಸಲಿದ್ದಾರೆ. ಅವರಿಗೆ ಸಹಾಯ ಮಾಡಲು 12 ಹುಡುಗಿಯರು ಮೆಂಟರ್ಸ್ ಆಗಿರಲಿದ್ದಾರೆ.
ಈ ಬಾರಿಯ ಸ್ಪರ್ಧಿಗಳು ಸಹ ಒಬ್ಬರಿಗಿಂತ ಮತ್ತೊಬ್ಬರು ವಿಶೇಷ ವ್ಯಕ್ತಿತ್ವ ಮತ್ತು ಹಿನ್ನೆಲೆಯುಳ್ಳವರಾಗಿದ್ದಾರೆ. ಕಿತ್ತೂರಿನ ರೈತ ದೇವೇಂದ್ರ, ಚಾಮರಾಜನಗರದ ರಂಗಕಲಾವಿದ ಮನೋಜ್, ಹೊನ್ನಾವರದ ಕಬ್ಬಿನ ಹಾಲಿನ ವ್ಯಾಪಾರಿ ಶ್ರೀರಾಮ, ತುಮಕೂರಿನ ಹಾಲಿನ ವ್ಯಾಪಾರಿ ಮಂಜುನಾಥ, ಕಾರವಾರದ ಕೂಲಿ ಕಾರ್ವಿುಕ ಸಂತೋಷ, ಬಾಗಲಕೋಟೆ ಮೀನುಗಾರ ರಮೇಶ, ದಾವಣಗೆರೆಯ ಟ್ರಾ್ಯಕ್ಟರ್ ಚಾಲಕ ನಾಗರಾಜ, ಹಾಸನದ ನಿರುದ್ಯೋಗಿ ಯುವಕ ಪ್ರಮೋದ್, ಕೂಲಿ ಕೆಲಸ ಮಾಡುವ ವರಪ್ರಸಾದ್, ಪಿರಿಯಾಪಟ್ಟಣದ ಕಾಫಿ ತೋಟದ ಕೆಲಸಗಾರ ಅಯ್ಯಪ್ಪ, ವಿಜಯಪುರದ ಕುಸ್ತಿಪಟು ಅಮಗೊಂಡ ಈ ಬಾರಿ ಪ್ಯಾಟೆಗೆ ಬರುತ್ತಿರುವ ಹಳ್ಳಿ ಹುಡುಗರು. ಇವರೆಲ್ಲರ ನಡುವಿನ ಆಟವೇ ‘ಹಳ್ಳಿ ಹೈದ ಪ್ಯಾಟೇಗ್ ಬಂದ’. ಸೆ.24ರಂದು ರಾ. 9ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
Be the first to comment