ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆದ ಗುರುನಂದನ್

ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆದ ಗುರುನಂದನ್

‘ಮಿಸ್ಟರ್ ಜಾಕ್’ ಚಿತ್ರದಲ್ಲಿ ಗುರು ನಂದನ್ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪಾತ್ರ ಮಾಡುತ್ತಿದ್ದಾರೆ.

ಗುರುನಂದನ್‍ ಅವರ ಚಿತ್ರಕ್ಕೆ ‘ಮಿಸ್ಟರ್ ಜಾಕ್’ ಎಂಬ ಶೀರ್ಷಿಕೆ ಇಡಲಾಗಿದ್ದು, ಟೈಟಲ್​ ರಿವೀಲ್​​ ಸಮಾರಂಭದಲ್ಲಿ ಚಿತ್ರತಂಡದವರು ಹಾಜರಿದ್ದರು.

ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಸುಮಂತ್ ಗೌಡ   “ಇದು ನನ್ನ ಚೊಚ್ಚಲ ಚಿತ್ರ. ಮೊದಲು ಗುರುನಂದನ್‍ ಅವರಲ್ಲಿ ಕಥೆ ಹೇಳಿದೆ, ಅವರಿಗೆ ಇಷ್ಟವಾಯಿತು. ನಾನೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತೇನೆ ಎಂದರು. ಇಲ್ಲಿ ನಾಯಕನ ಹೆಸರು ಜಾನಕಿರಾಮ್‍. ಸ್ಟ್ಯಾಂಡ್​ ಅಪ್​ ಕಾಮಿಡಿಯನ್ಸ್ ತಮ್ಮ ಹೆಸರುಗಳನ್ನು ಚಿಕ್ಕದಾಗಿ ಇಟ್ಟುಕೊಳ್ಳುತ್ತಾರೆ. ಹಾಗೇ ಇಲ್ಲಿ ನಾಯಕ ನಟ ಮಿಸ್ಟರ್ ಜಾಕ್ ಎಂದು ಗುರುತಿಸಿಕೊಳ್ಳುತ್ತಾನೆ. ಇದೊಂದು ರೊಮ್ಯಾಂಟಿಕ್‍ ಕಾಮಿಡಿ ಮತ್ತು ಫ್ಯಾಮಿಲಿ ಡ್ರಾಮಾ. ಗುರುನಂದನ್‍ ಅವರನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೆದಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ” ಎಂದು ತಿಳಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಶೇ.75ರಷ್ಟು ಚಿತ್ರೀಕರಣ ಮುಗಿಸಿದ್ದೇವೆ. ಕೊನೆ ಹಂತದ ಚಿತ್ರೀಕರಣ ಜನವರಿ ಮೊದಲ ವಾರದಿಂದ ಶುರುವಾಗಲಿದೆ. ಒಂದು ಹಾಡು ಹೊರತುಪಡಿಸಿ, ಜನವರಿಯಲ್ಲಿ ಮಿಕ್ಕೆಲ್ಲಾ ಭಾಗದ ಚಿತ್ರೀಕರಣ ಮುಗಿಯಲಿದೆ. ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಗುರುನಂದನ್ ತಿಳಿಸಿದ್ದಾರೆ.

ಗುರುನಂದನ್‍ ಅವರು ‘ಮಂಡಿಮನೆ ಟಾಕೀಸ್‍’ ಎಂಬ ಚಲನಚಿತ್ರ ನಿರ್ಮಾಣ ಸಂಸ್ಥೆ ಹುಟ್ಟುಹಾಕಿದ್ದು, ಅದರಡಿ ಸ್ನೇಹಿತರ ಜೊತೆಗೂಡಿ ಒಂದು ಚಿತ್ರ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ಮಾಪಕಿ ಅಶ್ವಿನಿ‌ ಪುನೀತ್ ರಾಜ್‍ಕುಮಾರ್ ಕೆಲ ತಿಂಗಳ ಹಿಂದೆ ಕ್ಲ್ಯಾಪ್ ಮಾಡಿ ಚಾಲನೆ ನೀಡಿದ್ದರು.

ಚಿತ್ರದಲ್ಲಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಿತ್ರ, ಧರ್ಮಣ್ಣ ಕಡೂರ್, ಗೋಪಾಲಕೃಷ್ಣ ದೇಶಪಾಂಡೆ, ಗಿರಿ, ಸುಶ್ಮಿತಾ ಮತ್ತು ಜನಪ್ರಿಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕಾರ್ತಿಕ್ ಪತ್ತಾರ್ ನಟಿಸಿದ್ದಾರೆ. ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ, ಶಿವಸೇನಾ ಛಾಯಾಗ್ರಹಣವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!