ಶರಣ್ ನಟನೆಯ ಹೊಸ ಚಿತ್ರದ ಶೀರ್ಷಿಕೆ ವಿಭಿನ್ನವಾಗಿ ಅನಾವರಣಗೊಂಡಿದೆ. ಟೈಟಲ್ ಬಿಡುಗಡೆಗಾಗಿಯೇ ಇದೇ ಮೊದಲ ಬಾರಿಗೆ ನಿರ್ದೇಶಕರು, ನಿರ್ಮಾಪಕರು ಮತ್ತು ಹೀರೋ ಒಟ್ಟಾಗಿ ವಿಡಿಯೋ ಒಂದನ್ನು ಶೂಟ್ ಮಾಡಿದ್ದಾರೆ. ಅದಕ್ಕಾಗಿ ಕಥಾ ಕಾನ್ಸೆಪ್ಟ್ಗೆ ಮೊರೆ ಹೋಗಿದ್ದಾರೆ. ಹಿರಿಯ ನಿರ್ಮಾಪಕ ದ್ವಾರಕೀಶ್, ಈ ಟೈಟಲ್ ಟೀಸರ್ ಅನ್ನು ಸೋಮವಾರ ಬಿಡುಗಡೆ ಮಾಡಿದರು.
1981 ರಲ್ಲಿ ಬಿಡುಗಡೆಯಾಗಿ ಭಾರೀ ಜನಪ್ರಿಯತೆ ಪಡೆದಿದ್ದ “ಗುರು ಶಿಷ್ಯರು” ಸಿನಿಮಾದ ಶೀರ್ಷಿಕೆಯನ್ನು ಮತ್ತೆ ತಮ್ಮ ಚಿತ್ರಕ್ಕಾಗಿ ಮರುಬಳಕೆ ಮಾಡುತ್ತಿದ್ದಾರೆ ನಿರ್ಮಾಪಕ ತರುಣ್ ಕಿಶೋರ್ ಸುಧೀರ್. ಶರಣ್ ಅವರ ಲಡ್ಡು ಫಿಲ್ಮ್ಸ್ ಮತ್ತು ತರುಣ್ ಸುಧೀರ್ ಅವರ ತರುಣ್ ಸುಧೀರ್ ಕ್ರಿಯೇಟಿವ್ಸ್ ಈ ಹೊಸ ಸಿನೆಮಾ ನಿರ್ಮಾಣ ಮಾಡುತ್ತಿವೆ.
“ನನ್ನ ಮೊದಲ ನಿರ್ದೇಶನದ ಚಿತ್ರ (ಚೌಕ) ದ್ವಾರಕೀಶ್ ಅವರ ಸಂಸ್ಥೆಯಲ್ಲೇ ಆಗಿದ್ದು. ಅವರು ನಿರ್ಮಾಣ ಮಾಡಿ ನಟಿಸಿದ್ದ ಸಿನೆಮಾ ಗುರು ಶಿಷ್ಯರು. ಈಗ ಆದೇ ಹೆಸರಿನ ಚಿತ್ರ ನಾನು ನಿರ್ಮಾಣ ಮಾಡುತ್ತಿದ್ದೇನೆ. ಇದೊಂದು ಸುಂದರ ಕಾಕತಾಳೀಯ ಸನ್ನಿವೇಶ. ದ್ವಾರಕೀಶ್ ಅವರ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಗುರು ಶಿಷ್ಯರು ಸಿನಿಮಾ ಈ ಹೊತ್ತಿಗೂ ಜನರನ್ನು ರಂಜಿಸುತ್ತಿದೆ.
ನಾಲ್ಕು ದಶಕಗಳ ಇತಿಹಾಸ ಇರುವ ಆ ಚಿತ್ರದ ಟೈಟಲ್ ಅನ್ನು ಮತ್ತೆ ನಾವು ನಮ್ಮ ಚಿತ್ರಕ್ಕೆ ಆಯ್ಕೆ ಮಾಡುವಾಗ ತುಂಬಾನೇ ಯೋಚನೆ ಮಾಡಿದೆವು. ಈ ವಿಷಯವನ್ನು ಹಿರಿಯ ನಟರಾದ ದ್ವಾರಕೀಶ್ ಅವರ ಜತೆಯೂ ಚರ್ಚಿಸಿದಾಗ ಅವರೂ ಖುಷಿ ಪಟ್ಟರು. ಯಶಸ್ವಿ ಸಿನಿಮಾದ ಶೀರ್ಷಿಕೆ ಇಡುವಾಗ ಸಾಕಷ್ಟು ತಯಾರಿ ನಮ್ಮಿಂದ ಆಗಿರಬೇಕು. ಆ ಎಲ್ಲ ತಯಾರಿಯನ್ನು ಮಾಡಿಕೊಂಡು ಸಿನಿಮಾ ಮಾಡುತ್ತಿದ್ದೇವೆ. ನನ್ನ ಸಂಸ್ಥೆಯಲ್ಲಿ ಇಷ್ಟು ಬೇಗ ಸಿನೆಮಾ ನಿರ್ಮಾಣ ಆಗುತ್ತಿರುವ ಖುಷಿ ನನಗಿದೆ,” ಎನ್ನುತ್ತಾರೆ ತರುಣ್.
ಶರಣ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಪಕರೂ ಕೂಡ. “ದ್ವಾರಕೀಶ್ ಅವರ ಗುರು ಶಿಷ್ಯರು ಕನ್ನಡದಲ್ಲಿ ಒಂದು ಎಪಿಕ್ ಸಿನೆಮಾ. ದ್ವಾರಕೀಶ್ ಅವರು ನಮ್ಮ ಲಿವಿಂಗ್ ಲೆಜೆಂಡ್. ಜನರ ಮನಸಲ್ಲಿ ಅಚ್ಚಳಿಯದೆ ಉಳಿದಿರುವ ಸಿನೆಮಾ ಮತ್ತು ಟೈಟಲ್ ಗುರುಶಿಷ್ಯರು. ಅದನ್ನು ನಾವು ಬಳಸಲು ಅವರನ್ನು ಕೇಳಿದಾಗ ಅವರು ತೋರಿಸಿದ ಪ್ರೀತಿ ಮತ್ತು ಆಶೀರ್ವಾದ ದೊಡ್ಡದು.
ಲಡ್ಡು ಸಿನೇಮಸ್ ಮತ್ತು ತರುಣ್ ಸುಧೀರ್ ಕ್ರಿಯೇಟಿವ್ಸ್ ಒಂದೇ ಸಂಸ್ಥೆ ಎಂದರೂ ತಪಲ್ಲ. ಚಿತ್ರದ ಟೈಟಲ್ ಪ್ರಕಟಣೆ ಆಗುತ್ತಿದೆ ಎಂದು ಹೇಳಿದನ್ನೇ ಇಷ್ಟು ದೊಡ್ಡ ಸುದ್ದಿ ಮಾಡಿದ ಎಲ್ಲಾ ಪತ್ರಿಕಾ, TV ಹಾಗೂ online ಮಾಧ್ಯಮದ ಸ್ನೇಹಿತರಿಗು ಧನ್ಯವಾದಗಳು,” ಎಂದಿದ್ದಾರೆ ಶರಣ್.
ಈ ವರ್ಷ ಜೆಂಟಲೆಮನ್ ಸಿನೆಮಾದೊಂದಿಗೆ ಸ್ವತಂತ್ರ ನಿರ್ದೇಶಕರಾದ ಜಡೇಶ್ ಹಂಪಿ ಅವರು ಗುರು ಶಿಷ್ಯರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 1995ರಲ್ಲಿ ನಡೆಯುವ ಕಥೆ ಎಂದು ಹೇಳಿರುವ ಅವರು, ಚಿತ್ರದ ಇತರೇ ವಿವರಗಳನ್ನು ಸದ್ಯದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ.
ಬಿ.ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದ್ದು, ಆರೂರು ಸುಧಾಕರ್ ಶೆಟ್ಟಿ ಅವರ ಸಿನಿಮಾಟೋಗ್ರಫಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಲಡ್ಡು ಸಿನಿಮಾ ಹೌಸ್, ತರುಣ್ ಸುಧೀರ್ ಕ್ರಿಯೇಟಿವ್ಸ್ ಬ್ಯಾನರ್ ನ ಸಿನಿಮಾ ಇದಾಗಿದೆ.
Be the first to comment