ಗುರಿ

Movie Review: ಶಿಕ್ಷಣಕ್ಕಾಗಿ ಮಕ್ಕಳ ಹೋರಾಟದ ‘ಗುರಿ’

ಚಿತ್ರ: ಗುರಿ
ನಿರ್ದೇಶನ: ಸೆಲ್ವಂ ಮತಪ್ಪನ್
ನಿರ್ಮಾಪಕರು: ರಾಧಿಕಾ, ಚಿತ್ರಲೇಖ
ತಾರಾಗಣ: ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್ ಭೂಷಣ್, ನಾಗಾಭರಣ, ಅಚ್ಚುತ ಕುಮಾರ್, ಜಯಶ್ರೀ, ಅವಿನಾಶ್ ಇತರರು
ರೇಟಿಂಗ್: 4

ಖಾಸಗಿ ಶಿಕ್ಷಣ ಸಂಸ್ಥೆಗಳ ಧನ ದಾಹಕ್ಕೆ ಮುಚ್ಚಿ ಹೋಗುವ ಸರಕಾರಿ ಶಾಲೆಯನ್ನು ಮತ್ತೆ ಪುನರ್ ಆರಂಭಿಸಲು ಹೋರಾಡುವ ಇಬ್ಬರು ವಿದ್ಯಾರ್ಥಿಗಳ ಕತೆಯನ್ನು ಹೊಂದಿದ ಚಿತ್ರ ಈ ವಾರ ತೆರೆಗೆ ಬಂದಿರುವ ಗುರಿ.

ಶಿಕ್ಷಣದ ಮಹತ್ವವನ್ನು ತಿಳಿಸುವ ಈ ಚಿತ್ರ ಗ್ರಾಮೀಣ ಭಾಗದ ಕಥೆಯನ್ನು ಹೊಂದಿದೆ. ಖಾಸಗಿ ಶಾಲೆಗಳ ಹುನ್ನಾರದಿಂದ ಸರಕಾರಿ ಶಾಲೆ ಮುಚ್ಚಲ್ಪಟ್ಟಾಗ ವಿದ್ಯಾರ್ಥಿಗಳಿಬ್ಬರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಶಾಲೆಯನ್ನು ಮತ್ತೆ ಆರಂಭಿಸುವಲ್ಲಿ ಯಶಸ್ವಿಯಾಗುತ್ತಾರೆ. ಮಕ್ಕಳ ಚಿತ್ರವಾದರೂ ಇದು ಸಾಮಾಜಿಕ ಕಳಕಳಿಯ ಕಾರಣಕ್ಕಾಗಿ ಗಮನ ಸೆಳೆಯುತ್ತದೆ.

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದ ಕಾರಣ ಸರಕಾರಿ ಶಾಲೆ ಮುಚ್ಚಿದಾಗ ಮುಖ್ಯಮಂತ್ರಿಯನ್ನು ಭೇಟಿಯಾದರೆ ಶಾಲೆ ಮತ್ತೆ ಆರಂಭ ಆಗುತ್ತದೆ ಎನ್ನುವ ಮಾತು ಕೇಳಿ ಮಕ್ಕಳಿಬ್ಬರು ಬೆಂಗಳೂರಿಗೆ ಹೊರಡುತ್ತಾರೆ. ಈ ಸಂದರ್ಭದಲ್ಲಿ ಅವರು ಮಕ್ಕಳನ್ನು ಅಪಹರಿಸುವ ದೊಡ್ಡ ಗ್ಯಾಂಗ್ ಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಅಲ್ಲಿಂದ ತಪ್ಪಿಸಿಕೊಂಡು ಮುಂದೆ ಮಾಧ್ಯಮದ ನೆರವಿನಿಂದ ದೊಡ್ಡ ಪ್ರತಿಭಟನೆ ನಡೆದು ಮುಖ್ಯಮಂತ್ರಿಗಳು ಶಾಲೆಯನ್ನು ಪುನರ್ ಆರಂಭಿಸುತ್ತಾರೆ. ರಾಜ್ಯದಲ್ಲಿ ಒಬ್ಬ ವಿದ್ಯಾರ್ಥಿಯಿದ್ದರೂ ಶಾಲೆಯನ್ನು ಮುಚ್ಚುವುದಿಲ್ಲ ಎನ್ನುವ ಭರವಸೆಯನ್ನು ಸಿಎಂ ನೀಡುತ್ತಾರೆ.

ಮಕ್ಕಳ ಚಿತ್ರವಾದರೂ ಇಲ್ಲಿ ದೊಡ್ಡ ನಟರು ನಟಿಸಿದ್ದಾರೆ. ಮುಖ್ಯಮಂತ್ರಿಯ ಪಾತ್ರದಲ್ಲಿ ನಟಿಸಿರುವ ನಾಗಭರಣ ಅವರು ಚಿತ್ರದಲ್ಲಿ ಹೇಳುವ ಮನುಷ್ಯನಿಗೆ ಪ್ರಾಣ ಮತ್ತು ಶಿಕ್ಷಣ ಬಹಳ ಮುಖ್ಯ. ಉಸಿರು ಇದ್ದರೆ ಜೀವ, ಶಿಕ್ಷಣ ಇದ್ದರೆ ಜೀವನ ಎನ್ನುವ ಸಂದೇಶವನ್ನು ಚಿತ್ರ ನೀಡುತ್ತದೆ.

ಶಾಲೆಯ ಅಧ್ಯಾಪಕನ ಪಾತ್ರದಲ್ಲಿ ಅಚ್ಚುತ್ ಕುಮಾರ್ ಮನೋಜ್ಞವಾಗಿ ನಟಿಸಿದ್ದಾರೆ. ಮಾಧ್ಯಮದ ಪ್ರತಿನಿಧಿಯಾಗಿ ಅವಿನಾಶ್ ಸಾಮಾಜಿಕ ಜವಾಬ್ದಾರಿಯ ಮೂಲಕ ಗಮನಸೆಳೆಯುತ್ತಾರೆ. ಬಾಲನಟರಾದ ಮಹಾನಿಧಿ ಹಾಗೂ ಜಿವಿತ್ ಭೂಷಣ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಶಿಕ್ಷಣ ಇಂದು ವ್ಯಾಪಾರ ಆಗುತ್ತಿರುವ ಹೊತ್ತಿನಲ್ಲಿ ಬಡವರ ಮಕ್ಕಳ ಶಿಕ್ಷಣದ ಬಗ್ಗೆ ಕಳಕಳಿ ತೋರುವ ಸಾಮಾಜಿಕ ಜವಾಬ್ದಾರಿ ಹೊಂದಿರುವ ಈ ಚಿತ್ರವನ್ನು ಎಲ್ಲರೂ ನೋಡಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!