‘ಗುಡುಗುಡಿಯ ಸೇದಿ ನೋಡೋ’.. ಹೊಸಬರ ಅಡ್ವೆಂಚರಸ್​ ಕಥಾನಕ!

ಕನ್ನಡದಲ್ಲಿ ಹೊಸಬರ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಈವರೆಗೆ ತೋರಿಸಿದ್ದನ್ನು ಹೊರತುಪಡಿಸಿ ಹೊಸತನದೊಂದಿಗೆ ಆಗಮಿಸುತ್ತಿದ್ದಾರೆ. ಇದೀಗ ಆ ಭರವಸೆಯನ್ನು ಹೊತ್ತು ಬಂದಿದೆ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾತಂಡ. ‘ಹಾಗಂತ ಸದ್ಯದ ಡ್ರಗ್ಸ್, ಗಾಂಜಾ ಹಾವಳಿಯ ಸುತ್ತ ಈ ಸಿನಿಮಾ ಇದೆ ಎಂದು ಭಾವಿಸಬೇಡಿ…’ ಎನ್ನುತ್ತಲೇ ಚಿತ್ರದ ಟೀಸರ್ ಮತ್ತು ಹಾಡೊಂದನ್ನು ತೆರೆಮೇಲೆ ಬಿತ್ತರಿಸಿದರು.

ವಾಟರ್ ಏಂಜಲ್ಸ್ ಸಿನಿಮಾಸ್​ ಲಾಂಛನದಲ್ಲಿ ಕೃಷ್ಣಕಾಂತ್​ ಎನ್​ ಗುಡುಗುಡಿಯಾ ಸೇದಿ ನೋಡೋ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೊಟೇಲ್​ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣಕಾಂತ್​ಗೆ ಮೊದಲಿಂದಲೂ ಸಿನಿಮಾ ಮಾಡಬೇಕು ಎಂಬ ಬಯಕೆ ಇತ್ತು. ಆ ಆಸೆಯನ್ನು ಈ ಚಿತ್ರದ ಮೂಲಕ ಈಡೇರಿಸಿಕೊಂಡಿದ್ದು, ಸಂಪೂರ್ಣ ಹೊಸ ತಂಡದೊಟ್ಟಿಗೆ ಆಗಮಿಸಿದ್ದಾರೆ.

ಚಿತ್ರದ ಬಗ್ಗೆ ಮೊದಲಿಗೆ ಮಾತನಾಡಿದ ನಿರ್ದೇಶಕ ಜಂಟಿ ಹೂಗಾರ್​, ‘ಟೈಟಲ್​ನಲ್ಲಿ ಒಂದು ಗಟ್ಟಿತನ ಬೇಕಿತ್ತು. ಕಥೆಯ ಶೈಲಿಯೂ ಬೇರೆಯದ್ದಾಗಿರುವುದರಿಂದ ಅದಕ್ಕೆ ಒಪ್ಪುವ ಶೀರ್ಷಿಕೆಯ ಹುಡುಕಾಟದಲ್ಲಿದ್ದಾಗ, ಗುಡುಗುಡಿಯಾ ಸೇದಿ ನೋಡೋ ತುಂಬ ಹತ್ತಿರ ಎನಿಸಿತು. ಹಾಗಾಗಿ ಅದನ್ನೇ ಆಯ್ದುಕೊಂಡಿದ್ದೇನೆ. ಪ್ರಸ್ತುತ ನಡೆಯುತ್ತಿರುವ ಸನ್ನಿವೇಶಕ್ಕೂ ಈ ಶೀರ್ಷಿಕೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿಕೊಳ್ಳುವ ನಿರ್ದೇಶಕರು, ಈ ಮೊದಲು ಸಭ್ಯ ಎನ್ನುವ ಕಿರುಚಿತ್ರ ನಿರ್ದೇಶಿಸಿದ್ದರು. ಹಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿಯೂ ಕೆಲಸ ಮಾಡಿದ ಅನುಭವ ಅವರಿಗಿದೆ. ಅದೆಲ್ಲವನ್ನು ಒಟ್ಟು ಸೇರಿಸಿಕೊಂಡು ಗುಡುಗುಡಿಯಾ ಸೇದಿ ನೋಡೋ ಸಿನಿಮಾ ಮಾಡಿದ್ದಾರೆ.

‘ಚಿತ್ರದ ಶೇ. 90 ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಪಯಣದ ಹಾದಿಯಲ್ಲಿ ಮಿಸ್ಟರಿ ಥ್ರಿಲ್ಲರ್​ ಶೈಲಿಯ ಕಥೆ ತೆರೆದುಕೊಳ್ಳುತ್ತದೆ. ಪ್ಯಾಚ್​ವರ್ಕ್​ ನಡೆಯುತ್ತಿದ್ದು, ಡಿಸೆಂಬರ್​ ವೇಳೆಗೆ ಚಿತ್ರಮಂದಿರಕ್ಕೆ ಬರುತ್ತೇವೆ. ಬುಡಕಟ್ಟು ಸಮುದಾಯ, 600, 700 ವರ್ಷಗಳ ಹಿಂದಿನ ಒಂದಷ್ಟು ನಾಗರಿಕತೆ ಮತ್ತು ಕನ್ನಡದ ಕಂಪೂ ಈ ಚಿತ್ರದಲ್ಲಿ ಕಾಣಿಸಲಿದೆ.

ಬೆಂಗಳೂರು ಸೇರಿ ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ಚಿತ್ರದಲ್ಲಿ ಹಳಗನ್ನಡದ ಬಳಕೆ ಇರುವುದರಿಂದ ಕನ್ನಡ ಚಿತ್ರದಲ್ಲಿ ಕನ್ನಡದ ಸಬ್​ಟೈಟಲ್​ ಅನ್ನು ನೀವೆಲ್ಲ ನೋಡಲಿದ್ದೀರಿ’ ಎಂದು ಹೇಳಿಕೊಳ್ಳುತ್ತಾರೆ ಜಂಟಿ ಹೂಗಾರ್.

ನಾನು ಹೊಟೇಲ್​ ಉದ್ಯಮದವನು. ಅಡುಗೆ ಹದವಾದರೆ ಮಾತ್ರ ರುಚಿಸುತ್ತದೆ. ಜಂಟಿ ಹೂಗಾರ್ ಅವರು ಅಂತದ್ದೇ ಹದವಾದ ಕಥೆಯನ್ನು ತಂದಿದ್ದರು. ಜನಪದದ ಸೊಗಡಿನ ಜತೆಗೆ ಆಗಮಿಸಿದ್ದರು. ಅವರ ಕಥೆಯನ್ನು ಮತ್ತಷ್ಟು ಮೊನಚಾಗಿಸಿ ಕಳೆದ ಎರಡು ವರ್ಷದ ಹಿಂದೆಯೇ ಸಿನಿಮಾ ಶುರುವಾಗಿ ಇದೀಗ ಬಿಡುಗಡೆಗೆ ತಂದಿದ್ದೇವೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಕೃಷ್ಣಕಾಂತ್ ಎನ್.

ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ಸುಜಿತ್​ ಪೂರ್ಣ ಪ್ರಮಾಣದಲ್ಲಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಕಾಲೇಜು ದಿನಗಳಿಂದ ಸಿನಿಮಾ ಬಗ್ಗೆ ಆಕರ್ಷಣೆ ಹೊಂದಿದ್ದ ಐಶ್ವರ್ಯಾ ದಿನೇಶ್​ ಮಾಡೆಲಿಂಗ್​ ನಲ್ಲಿ ಮಿಂಚಿ, 2016ರಲ್ಲಿ ಮಿಸ್​ ಕ್ವೀನ್​ ಆಫ್​ ಕರ್ನಾಟಕ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಟಿವಿ ಜಾಹೀರಾತುಗಳಲ್ಲಿಯೂ ಭಾಗವಹಿಸಿದ್ದಾರೆ. ಕಳೆದ 14 ವರ್ಷದಿಂದ ಭರತನಾಟ್ಯದಲ್ಲಿ ಪಳಗಿರುವ ರಶ್ಮಿತಾ ಗೌಡ, ಈ ಚಿತ್ರದಲ್ಲಿ ಮತ್ತೋರ್ವ ನಾಯಕಿಯಾಗಿದ್ದಾರೆ. ನಿರಂಜನ್​ಗೂ ಇದು ಮೊದಲ ಸಿನಿಮಾ ಆಗಿದ್ದು ನಿಖಿಲ್ ಎಂಬ ಪಾತ್ರ ಮಾಡಿದ್ದಾರೆ. ಇನ್ನು ಹೊಸಬರ ತಂಡದ ಕೆಲಸಕ್ಕೆ ಬೆನ್ನುತಟ್ಟಲು ನಿರ್ಮಾಪಕ ನವರಸನ್​ ಅತಿಥಿಯಾಗಿ ಆಗಮಿಸಿ, ಟೀಸರ್ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

ನಿರ್ದೇಶಕರ ಪ್ರಕಾರ ಪಾತ್ರವರ್ಗದ ಶಕ್ತಿ ಒಂದೆಡೆಯಾದರೆ, ತಾಂತ್ರಕ ವರ್ಗ ಇಡೀ ಚಿತ್ರದ ಬೆನ್ನೆಲುಬು ಎನ್ನುತ್ತಾರೆ. ಕಥಾಸಂಗಮ ಚಿತ್ರದಲ್ಲಿ ಕೆಲಸ ಮಾಡಿದ್ದ ದೀಪಿಕ್​ ಯರಗೇರಾ ಗುಡುಗುಡಿಯಾ ಸೇದಿ ನೋಡೋ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಮೈಸೂರು ಮೂಲದ ಉದಿತ್​ ಹರಿದಾಸ್​ ಸಂಗೀತದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ವರದರಾಜ್​ ಕಾಮತ್​ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ರವಿ ಸಿಂಧನೂರು ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

 

ನಾಯಕ : ಸೂಜಿತ್ ಪೂರ್ಣ ನಾಯಕಿ : ಐಶ್ವರ್ಯಾ ದಿನೇಶ್​

ನಿರ್ಮಾಪಕ : ಕೃಷ್ಣಕಾಂತ್ ಎನ್. ನಿರ್ದೇಶಕ : ಜಂಟಿ ಹೂಗಾರ್

Be the first to comment

Leave a Reply

Your email address will not be published. Required fields are marked *

Translate »
error: Content is protected !!