25 ದಿನ ಪೂರೈಸಿದ ಗ್ರೂಫಿ ಸಿನಿಮಾ

ಯುವ ಕಲಾವಿದರನ್ನು ಒಳಗೊಂಡ ಹೊಸ ಚಿತ್ರತಂಡ ನಿರ್ಮಿಸಿರುವ ‘ಗ್ರೂಫಿ ‘ಸಿನಿಮಾ ಬಿಡುಗಡೆಯಾಗಿ 25 ದಿನ ಪೂರೈಸಿದ್ದು, ಚಿತ್ರವನ್ನು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ.

ಸಿನಿಮಾದ 25ನೇ ದಿನದ ಭಾಗವಾಗಿ ಸೆಲೆಬ್ರಿಟಿ ಶೋ ವೇಳೆ ಮಾತನಾಡಿದ ನಿರ್ಮಾಪಕ ಕೆ ಜೆ ಸ್ವಾಮಿ, ” ಗ್ರೂಫಿ ಚಿತ್ರ ಬೆಂಗಳೂರಿನ ಮಲ್ಟಿಫ್ಲೆಕ್ಸ್ ಗಳಲ್ಲಿ ಪ್ರದರ್ಶನ ಆಗುತ್ತಿದೆ. ಸೆ.9, 10 ರಿಂದ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಮಲ್ಟಿಫ್ಲೆಕ್ಸ್ ಗಳಾದ ಜಿ ಟಿ ಮಾಲ್, ಮಂತ್ರಿ ಮಾಲ್, ರಾಕ್ ಲೈನ್ ಮಾಲ್, ಒರೆಯನ್ ಮಾಲ್ ಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಚಿತ್ರವನ್ನು ನೋಡಿ ಪ್ರೇಕ್ಷಕರು ಉತ್ತಮ ಅಭಿಪ್ರಾಯ ನೀಡುತ್ತಿದ್ದಾರೆ” ಎಂದು ಹೇಳಿದರು.

“ಮೊದಲ ಬಾರಿಗೆ ನಿರ್ಮಾಪಕ ಆಗಿ ಹೆಮ್ಮೆ ಎನಿಸಿದರೂ, ಪರಭಾಷಾ ಚಿತ್ರಗಳ ಹಾವಳಿಯಿಂದ ಚಿತ್ರ ಪ್ರದರ್ಶನ ರದ್ದು, ಸಮಯ ಬದಲಾವಣೆ ಮಾಡುವುದು ಆಗುತ್ತಿದೆ. ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಇದನ್ನು ಟೇಕಲ್ ಮಾಡಲಾಗುತ್ತಿದೆ. ಉತ್ತಮ ಕಂಟೆಂಟ್ ಇರುವ ಕಾರಣ ಚಿತ್ರ ಮೂರನೇ ವಾರ ಪೂರೈಸಿದೆ. ಕನ್ನಡದಲ್ಲಿ ಉತ್ತಮ ಚಿತ್ರ ಬರುತ್ತಿಲ್ಲ ಎಂದು ಕೆಲವರು ಹೇಳುತ್ತಾರೆ. ಹೊಸ ತಂಡ ಆದರೂ ಗ್ರೂಫಿ ಚಿತ್ರ ದೊಡ್ಡ ಹಿಂದಿ, ಇಂಗ್ಲಿಷ್ ಚಿತ್ರಗಳ ನಡುವೆ ಗಮನ ಸೆಳೆದಿದೆ. ಪ್ರೇಕ್ಷಕರು ಈ ಚಿತ್ರವನ್ನು ನೋಡಬೇಕು” ಎಂದು ಮನವಿ ಮಾಡಿದರು.

ರವಿ ಅರ್ಜುನ್ ನಿರ್ದೇಶನದ 1 ಗಂಟೆ 52 ನಿಮಿಷದ ಸಸ್ಪೆನ್ಸ್, ಥ್ರಿಲ್ಲರ್ ಗ್ರೂಫಿ ಸಿನೆಮಾ, ಫೋಟೋ ಜರ್ನಲಿಸ್ಟ್ ಒಬ್ಬನಿಗೆ ಪಶ್ಚಿಮ ಘಟ್ಟದಲ್ಲಿ ಎದುರಾಗುವ ಸನ್ನಿವೇಶದ ಕಥೆಯನ್ನು ಆಧರಿಸಿದೆ. ಈ ಚಿತ್ರ ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.

ಚಿತ್ರದಲ್ಲಿ ನಟ ಆರ್ಯನ್ ಅವರು ಕಾರ್ತಿಕ್ ಆಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪದ್ಮಶ್ರೀ ಜೈನ್, ಗಗನ್ ಗೌಡ, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ ಅವರು ಚಿತ್ರದಲ್ಲಿ ನಟಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!