ಗೋವಾ ಸರ್ಕಾರ, ಎಂಟರ್ಟೈನ್ಮೆಂಟ್ ಸೊಸೈಟಿ ಆಫ್ ಗೋವಾ ಮತ್ತು ಎನ್.ಎಫ್.ಡಿ.ಸಿ ಇಂಡಿಯಾ ಜಂಟಿಯಾಗಿ ಗೋವಾದ ಪಣಜಿಯಲ್ಲಿ ಆಯೋಜಿಸಿರುವ 54ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವಿಜಯ್ ರಾಘವೇಂದ್ರ ನಟನೆಯ ‘ಗ್ರೇ ಗೇಮ್ಸ್’ ಚಿತ್ರ ಆಯ್ಕೆ ಆಗಿದೆ.
ಬಿಡುಗಡೆಗೆ ಸಜ್ಜಾಗಿರುವ ‘ಗ್ರೇ ಗೇಮ್ಸ್’ ಸಿನಿಮಾ ಗೋವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ರೆಡ್ ಕಾರ್ಪೆಟ್ ಗಾಲ ಪ್ರೀಮಿಯರ್’ ವಿಭಾಗದಡಿ ಮೊದಲ ಪ್ರದರ್ಶನ ಕಾಣುತ್ತಿದೆ. ವಿಜಯ್ ರಾಘವೇಂದ್ರ, ಭಾವನಾ ರಾವ್, ಶ್ರುತಿ ಪ್ರಕಾಶ್, ಅಪರ್ಣ ವಸ್ತಾರೆ, ಜೈ ಸೇರಿದಂತೆ ಹಲವರು ನಟಿಸಿರುವ ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಗಂಗಾಧರ್ ಸಾಲಿಮಠ್ ನಿರ್ದೇಶಿಸಿದ್ದಾರೆ.
ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಸೈಕಾಲಜಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಭಾವನಾ ರಾವ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಶ್ರುತಿ ಪ್ರಕಾಶ್ ನಟಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಜೈ (ವಿಜಯ್ ರಾಘವೇಂದ್ರ ಹಾಗೂ ಶ್ರೀಮುರಳಿ ಸಹೋದರಿ ಪುತ್ರ) ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹಲವು ರೋಚಕ ತಿರುವುಗಳಿರುವ ಈ ಚಿತ್ರ ಭಾವನಾತ್ಮಕವಾಗಿ ಮೂಡಿ ಬಂದಿದೆ.
”ಇದೊಂದು ಫ್ಯಾಮಿಲಿ ಸಸ್ಪೆನ್ಸ್ ಡ್ರಾಮಾ ಆಗಿದ್ದು, ವರ್ಚುವಲ್ ಮತ್ತು ನೈಜತೆ ನಡುವೆ ಯಾವುದು ಸರಿ, ಯಾವುದು ತಪ್ಪು ಎಂಬ ನಮ್ಮ ದೃಷ್ಟಿಕೋನಕ್ಕೆ ಸವಾಲು ಎಸೆಯುವಂತಿದೆ. ಈ ಚಿತ್ರ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಅವರ ಮೇಲೆ ಪ್ರಭಾವ ಬೀರುತ್ತದೆ ಎಂಬ ನಂಬಿಕೆ ಖಂಡಿತ ಇದೆ” ಎಂದು ನಿರ್ದೇಶಕ ಗಂಗಾಧರ್ ಸಾಲಿಮಠ್ ತಿಳಿಸಿದ್ದಾರೆ.
”ನಮ್ಮ ತಂಡಕ್ಕೆ ಇಂಥದ್ದೊಂದು ಅವಕಾಶ ಕಲ್ಪಿಸಿಕೊಟ್ಟ ಆಯ್ಕೆ ಸಮಿತಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಒಂದು ಅದ್ಭುತ ಅನುಭವ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ” ಎಂದು ನಿರ್ಮಾಪಕ ಆನಂದ್ ಹೆಚ್ ಮುಗುದ್ ಖುಷಿ ವ್ಯಕ್ತಪಡಿಸಿದ್ದಾರೆ.
ವರುಣ್ ಡಿ.ಕೆ ಛಾಯಾಗ್ರಹಣ ಈ ಚಿತ್ರಕ್ಕಿದೆ. ಗ್ರೇ ಗೇಮ್ಸ್ ಚಿತ್ರ 2024ಕ್ಕೆ ಬಿಡುಗಡೆ ಆಗಲು ಸಿದ್ಧತೆ ನಡೆಸಿದೆ.
Be the first to comment