ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ನಟಿಸಿರುವ ಕೊನೆಯ ಸಿನಿಮಾ ‘ಜೇಮ್ಸ್’ ಪುನೀತ್ ಹುಟ್ಟುಹಬ್ಬವಾದ ಮಾರ್ಚ್ 17ರಂದು ಬಿಡುಗಡೆ ಆಗುತ್ತಿದೆ. ಸಿನಿಮಾವನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಈಗಾಗಲೇ ಸಿದ್ಧತೆ ನಡೆಸಿದ್ದಾರೆ.
ಜೇಮ್ಸ್’ ಬಿಡುಗಡೆಯ ವೀರೇಶ್ ಚಿತ್ರಮಂದಿರದ ಬಳಿ ನಡೆಯಲಿರುವ ಕಾರ್ಯಕ್ರಮದ ಪಟ್ಟಿ ಬಿಡುಗಡೆ ಆಗಿದ್ದು, ಕಾರ್ಯಕ್ರಮಗಳ ಅದ್ಧೂರಿತನ ಗಮನ ಸೆಳೆಯುತ್ತಿದೆ.
ಅಂದು ಪುನೀತ್ ನಾಯಕ ನಟನಾಗಿ ನಟಿಸಿರುವ 31 ಚಿತ್ರಗಳ ಬೃಹತ್ ಕಟೌಟ್ ಅಳವಡಿಸಿ ಎಲ್ಲಾ ಕಟೌಟ್ಗಳಿಗೂ ಹೂವಿನ ಹಾರ ಹಾಕಲಾಗುವುದು. ಹೆಲಿಕ್ಯಾಫ್ಟರ್ನಿಂದ ಅಪ್ಪು ಕಟೌಟ್ಗಳಿಗೆ ಪುಷ್ಪಾರ್ಚನೆ, ಮಾರ್ಚ್ 18ರ ಬೆಳಗ್ಗೆ ಸಿಹಿ ಹಂಚಿಕೆ, ಮಧ್ಯಾಹ್ನ ಅನ್ನದಾನ, ಸಂಜೆ ದೀಪೋತ್ಸವ, ಮಾರ್ಚ್ 19ಕ್ಕೆ ಅನ್ನದಾನ, ನೇತ್ರದಾನ ತಪಾಸಣೆ, ರಕ್ತದಾನ ಶಿಬಿರ, ಮಾರ್ಚ್ 20ಕ್ಕೆ ಚಿಕ್ಕನ್ ಬಿರಿಯಾನಿ ಹಂಚಿಕೆ, ಸಂಜೆ ಹೂವಿನ ಪಲ್ಲಕಿಯಲ್ಲಿ ಅಪ್ಪು-ರಾಜ್ ಭಾವಚಿತ್ರದೊಂದಿಗೆ ರಾಜಾಜಿನಗರ ಸಮುದಾಯ ಭವನದಿಂದ ವೀರೇಶ್ ಚಿತ್ರಮಂದಿರವರೆಗೆ ಮೆರವಣಿಗೆ, ಸಂಜೆ 6 ಗಂಟೆಗೆ ಡಿಜೆ ಅಳವಡಿಸಿ ನೃತ್ಯ ಕಾರ್ಯಕ್ರಮ ನಡೆಸಲಾಗುವುದು.
ಕಮಲಾನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ‘ಜೇಮ್ಸ್’ ಚಿತ್ರದ ಕಲಾವಿದರು ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಸ್ಯಾಂಡಲ್ವುಡ್ನ ಹಲವು ನಟ-ನಟಿಯರು ಇದರಲ್ಲಿ ಭಾಗಿ ಅಗಲಿದ್ದಾರೆ.
ಇದರ ಜೊತೆಗೆ ರಾಜ್ ಕುಮಾರ್, ಪಾರ್ವತಮ್ಮ, ಪುನೀತ್ ಅವರ ಬೃಹತ್ ಕಟೌಟ್ ಹಾಕಲಾಗುವುದು. ಹೆಲಿಕ್ಯಾಫ್ಟರ್ನಿಂದ ಪುನೀತ್ ಕಟೌಟ್ಗೆ 1 ಗಂಟೆ ಪುಷ್ಪಾರ್ಚನೆ, ಹೆಲಿಕ್ಯಾಫ್ಟರ್ನಿಂದ 40 ಅಡಿಯ ಪುನೀತ್ ಫೋಟೋ ತೂಗು ಬಿಡಲಾಗುವುದು. ಡೊಳ್ಳು ಕುಣಿತ, ಪೂಜಾಕುಣಿತ, ವೀರಗಾಸೆ ಸೇರಿದಂತೆ ಕೇರಳದ ಪ್ರಸಿದ್ಧ ವಾದ್ಯದವರಿಂದ ವಾದ್ಯಗೋಷ್ಠಿ ಮತ್ತು ಬೆಂಗಳೂರು ತಮಟೆ ಆಯೋಜನೆ ಮಾಡಲಾಗುತ್ತಿದೆ.
ಪುನೀತ್ ಕೊನೆಯ ಚಿತ್ರದ ಬಿಡುಗಡೆಗೆ ಅಭಿಮಾನಿಗಳು ಜಾತ್ರೆಯ ಸಂಭ್ರಮ ತರಲು ಮುಂದಾಗಿದ್ದಾರೆ.
____

Be the first to comment