‘ಶೋಲೆ’ ಖ್ಯಾತಿಯ ಬಾಲಿವುಡ್ ನಟ ಮತ್ತು ನಿರ್ದೇಶಕ ಗೋವರ್ಧನ್ ಅಸ್ರಾನಿ (84) ಮುಂಬೈನಲ್ಲಿ ನಿಧನರಾಗಿದ್ದಾರೆ.
ಭಾರತದ ಸಾರ್ವಕಾಲಿಕ ಚಿತ್ರಗಳಲ್ಲೊಂದಾದ ʻಶೋಲೆʼ ಚಿತ್ರದ ಜೈಲರ್ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಗೋವರ್ಧನ್ ಅಸ್ರಾನಿ ಮೂಲತಃ ರಾಜಸ್ಥಾನದ ಜೈಪುರದ ನಿವಾಸಿ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇಳಿ ವಯಸ್ಸಿನಲ್ಲಿ ಉತ್ಸಾಹ ಮತ್ತು ಹುಮ್ಮಸ್ಸಿನಲ್ಲಿ ಚಿತ್ರಗಳ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದ ಅಸ್ರಾನಿ, ಸೋಶಿಯಲ್ ಮೀಡಿಯಾ ಫಾಲೋವರ್ಸ್ಗಳಿಗೆ ಹಾಗೂ ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದರು. ನಿನ್ನೆ ಸಂಜೆ 4 ಗಂಟೆವರೆಗೆ ಅಸ್ರಾನಿ ಆರೋಗ್ಯವಾಗಿಯೇ ಇದ್ದರು. 4 ಘಂಟೆಯ ನಂತರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಸ್ರಾನಿ ಕೊನೆಯುಸಿರೆಳೆದರು.
ಪುಣೆಯ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ತರಬೇತಿ ಪಡೆದು 1960ರ ಸುಮಾರು ಚಿತ್ರರಂಗ ಪ್ರವೇಶ ಮಾಡಿದ್ದ ಅಸ್ರಾನಿ ಗಂಭೀರವಾದ ಪಾತ್ರಗಳನ್ನು ನಿರ್ವಹಿಸುವ ಮೂಲಕ ಗಮನ ಸೆಳೆದಿದ್ದರು. ಗುಜರಾತಿ , ರಾಜಸ್ಥಾನಿ ಚಿತ್ರಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಕೂಡ ಕೆಲಸ ಮಾಡಿದ್ದರು. ಅಸ್ರಾನಿ ಹಿಂದಿ ಮತ್ತು ಗುಜರಾತಿ ಚಲನಚಿತ್ರಗಳನ್ನು ನಿರ್ದೇಶಿಸುವ ಮೂಲಕ ಗಮನ ಸೆಳೆದಿದ್ದರು.
ಅಸ್ರಾನಿ ಅವರು 5 ದಶಕಕ್ಕೂ ಅಧಿಕ ಕಾಲ 350ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದರು. ಅಮಿತಾಬ್ ಬಚ್ಚನ್, ಧಮೇಂದ್ರ, ಹೇಮಾಮಾಲಿನಿ ಮತ್ತು ಜಯಾ ಬಚ್ಚನ್ ಅಭಿನಯದ ʻಶೋಲೆʼಯ ಜೈಲರ್ ಪಾತ್ರ ಅವರಿಗೆ ಹೆಸರು ತಂದು ಕೊಟ್ಟಿತ್ತು.
—-





Be the first to comment