‘ಗಾಳಿಪಟ 2’ ಚಿತ್ರಕ್ಕೆ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರು ಬರೆದಿರುವ ‘ನಾನಾಡದ ಮಾತೆಲ್ಲವ ಕದ್ದಾಲಿಸು..’ ಎಂಬ ಹಾಡನ್ನು ಸೋನು ನಿಗಮ್ ಸುಶ್ರಾವ್ಯವಾಗಿ ಹಾಡಿದ್ದಾರೆ . ‘ಗಾಳಿಪಟ’ ಸಿನಿಮಾದ ಮೊದಲ ಭಾಗದ ‘ಮಿಂಚಾಗಿ ನೀನು ಬರಲು..’ ಹಾಡು ಕೂಡ ಜಯಂತ ಕಾಯ್ಕಿಣಿ ಮತ್ತು ಸೋನು ನಿಗಮ್, ಗಣೇಶ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್‌ನಲ್ಲಿಯೇ ಮೂಡಿಬಂದು ಭರ್ಜರಿ ಯಶಸ್ಸು ಕಂಡಿತ್ತು. ಈಗ ‘ಗಾಳಿಪಟ 2’ ಚಿತ್ರದ ಈ ಹಾಡು ಕೂಡ ಅದೇ ರೀತಿ ಯಶಸ್ಸು ಕಾಣಲಿದೆ.
ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬ. ಗಣೇಶ್ ಅವರ ಬರ್ತ್‌ಡೇ ಪ್ರಯುಕ್ತ ‘ಗಾಳಿಪಟ 2’ ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡಲಿದೆ. ಆ ಮೂಲಕ ಗಣೇಶ್ ಅವರ ಬರ್ತ್‌ಡೇಗೆ ಚಿತ್ರತಂಡ ಉಡುಗೊರೆ ನೀಡಲಿದೆ.
”ಮತ್ತೆ ಕೋವಿಡ್ ಹೆಚ್ಚುತ್ತಿರುವ ಕಾರಣ, ನಾನು ಈ ಬಾರಿ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿಲ್ಲ. ನಾನು ಅಂದು ಬೆಂಗಳೂರಿನಲ್ಲಿ ಇರುವುದಿಲ್ಲ. ಈ ಹಾಡನ್ನು ಕೇಳಿ ಮತ್ತೆ ಹದಿನೈದು ವರ್ಷಗಳ ಹಿಂದೆ ಹೋದೆ. ಅದೇ ಕಾಂಬಿನೇಷನ್‌ನಲ್ಲಿ ಮತ್ತೆ ಇಂಪಾದ ಹಾಡು ಬಂದಿದೆ. ಅಷ್ಟೇ ಜನಪ್ರಿಯವಾಗಲಿದೆ ಎಂಬ ಭರವಸೆಯಿದೆ. ನನ್ನ ಹುಟ್ಟುಹಬ್ಬಕ್ಕೆ ಇದೊಂದು ವಿಶೇಷ ಉಡುಗೊರೆ. ನಿರ್ಮಾಪಕ ರಮೇಶ್ ರೆಡ್ಡಿ ಅವರು ಯಾವುದಕ್ಕೂ ಕೊರತೆ ಇಲ್ಲದೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಕುದುರೆಮುಖದಲ್ಲಿ ಸುಮಾರು 200 ಜನರ ತಂಡ ಇದ್ದೆವು. ಕಲಾ ನಿರ್ದೇಶಕ ಪಂಡಿತ್ ಅವರಂತೂ ಅದ್ಭುತ ಸೆಟ್ ಹಾಕಿದ್ದರು. ಯೋಗರಾಜ್ ಸರ್ ಬಗ್ಗೆ ಎಷ್ಟು ಹೇಳಿದರೂ ಕಡಿಮೆ. ನೀರಿನಲ್ಲಿ ಐರನ್ ಬಾಕ್ಸ್ ಇಟ್ಟು ಹೊಗೆ ಬರೆಸಿದ್ದಾರೆ ಅವರು. ಇದರ ಬಗ್ಗೆ ಕೇಳಿದಾಗ ಹುಡುಗ ಹೀಟ್ ಆಗಿರುತ್ತಾನೆ. ಇದು ಅದರ ಸಂಕೇತವೆಂದರು. ಧನು ಮಾಸ್ಟರ್ ಸುಂದರವಾಗಿ ನೃತ್ಯ ಸಂಯೋಜನೆ ಮಾಡಿದ್ದಾರೆ” ಎಂದರು ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್.
Be the first to comment