ಸೂಚನ್ ಶೆಟ್ಟಿ ನಟನೆ, ನಿರ್ದೇಶನದ ‘ಗಾಡ್ ಪ್ರಾಮಿಸ್’ ಚಿತ್ರಕ್ಕೆ ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ.
‘ಗಾಡ್ ಪ್ರಾಮಿಸ್’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಮೊದಲ ದೃಶ್ಯಕ್ಕೆ ರವಿ ಬಸ್ರೂರು ಅವರು ಕ್ಲ್ಯಾಪ್ ಮಾಡಿದರು. ಪ್ರಮೋದ್ ಶೆಟ್ಟಿ ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ನಿರ್ದೇಶಕ ಸೂಚನ್ ಶೆಟ್ಟಿ, ‘ಕಳೆದ 6-7 ತಿಂಗಳಿಂದ ಈ ಸಿನಿಮಾಗೆ ಪ್ರೀ-ಪ್ರೊಡಕ್ಷನ್ ಕೆಲಸ ಆರಂಭ ಮಾಡಿದ್ದೆವು. ನಾನು 2015ರಿಂದಲೂ ರವಿ ಬಸ್ರೂರು ಅವರ ತಂಡದಲ್ಲಿ ಮಾಡುತ್ತಿದ್ದೇನೆ. ಈಗ ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ’ ಎಂದು ಹೇಳಿದರು.
‘ಕುಂದಾಪುರ ಸುತ್ತಮುತ್ತ ‘ಗಾಡ್ ಪ್ರಾಮಿಸ್’ ಸಿನಿಮಾ ಚಿತ್ರೀಕರಣ ನಡೆಯಲಿದೆ. ಫ್ಯಾಮಿಲಿ ಡ್ರಾಮಾ ಶೈಲಿಯ ಕಥೆ ಸಿನಿಮಾದಲ್ಲಿದೆ. ಆಡಿಷನ್ ನಡೆಸಿ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ. ರವಿ ಸರ್ ನನಗೆ ಗುರುಗಳು. ನಿರ್ದೇಶನ ತಂಡದ ಜತೆಗೆ ‘ಕಟಕ’, ‘ಗಿರ್ಮಿಟ್’ ಚಿತ್ರಗಳ ಬರವಣಿಗೆಯಲ್ಲಿಯೂ ನಾನು ತೊಡಗಿಸಿಕೊಂಡಿದ್ದೆ. ಆ ಅನುಭವಗಳನನ್ನು ಇಟ್ಟುಕೊಂಡು ಈಗ ಡೈರೆಕ್ಷನ್ ಆರಂಭಿಸಿದ್ದೇನೆ’ ಎಂದರು.
ಸಂಗೀತ ನಿರ್ದೇಶಕ ರವಿ ಬಸ್ರೂರ್ ಮಾತನಾಡಿ, ‘ಒಂದು ಸಿನಿಮಾ ಮಾಡೋದರಿಂದ ಎಷ್ಟೋ ಕಲಾವಿದರು ಮತ್ತು ತಂತ್ರಜ್ಞರ ಭವಿಷ್ಯ ನಿರ್ಧಾರ ಆಗುತ್ತದೆ. ಕರಾವಳಿ ಭಾಗದಲ್ಲಿ ನೂರಾರು ಸಿನಿಮಾ ಬರಲಿ’ ಎಂದು ಹೇಳಿದರು.
ನಟ ಪ್ರಮೋದ್ ಶೆಟ್ಟಿ, ‘ಸೂಚನ್ ಯಾವುದೇ ಕೆಲಸ ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾನೆ. ನಟನೆ, ನಿರ್ದೇಶನ ಎರಡು ಒಟ್ಟಿಗೆ ಮಾಡುವುದರಿಂದ ಎಲ್ಲರೂ ಒಟ್ಟಿಗೆ ಸೇರಿ ಮುಂದುವರಿಯಿರಿ. ಇದು ಒಳ್ಳೆಯ ತಂಡವಾಗಿ ಹೊರಹೊಮ್ಮಲಿ. ಈ ಸಿನಿಮಾ ತುಂಬ ಚೆನ್ನಾಗಿ ಮೂಡಿಬರಲಿದೆ ಎಂಬ ಭರವಸೆ ಇದೆ. ಒಳ್ಳೆಯ ಬಜೆಟ್ ಸಹ ಇದೆ’ ಎಂದು ಹೇಳಿದರು.
‘ಮೈತ್ರಿ ಪ್ರೊಡಕ್ಷನ್’ ಮೂಲಕ ಮಂಜುನಾಥ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಈ ಸಿನಿಮಾಗೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಭರತ್ ಮಧುಸೂದನ್ ಸಂಗೀತ, ನವೀನ್ ಶೆಟ್ಟಿ ಸಂಕಲನ ಚಿತ್ರಕ್ಕೆ ಇರಲಿದೆ.
—-
Post Views:
114
Be the first to comment