ಕನ್ನಡ ಚಿತ್ರಗಳು ಹಿಟ್ ಆಗುತ್ತಿಲ್ಲ ಎನ್ನುವ ಕೂಗಿನ ನಡುವೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಗೋವಾಕ್ಕೆ ಜಾಲಿ ಟ್ರಿಪ್ ಮಾಡಿ ಹೊಡೆದಾಡಿಕೊಂಡ ಘಟನೆ ವರದಿಯಾಗಿದೆ.
ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಚರ್ಚಿಸಲು ಗೋವಾಕ್ಕೆ ತೆರಳಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಕೆಲ ವಿಷಯದಲ್ಲಿ ಮನಸ್ತಾಪ ಉಂಟಾಗಿ ಹೊಡೆದಾಡಿಕೊಂಡಿದ್ದಾರೆ. ಗೋವಾಕ್ಕೆ ತೆರಳಿರುವ ತಂಡದಲ್ಲಿ ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಇದ್ದಾರೆ.
40ಕ್ಕೂ ಹೆಚ್ಚು ಸದಸ್ಯರ ತಂಡ ಗೋವಾಕ್ಕೆ ತೆರಳಿದೆ. ಬೈಲಾ ತಿದ್ದುಪಡಿಯ ಸಂಬಂಧ ನಿರ್ಮಾಪಕರ ನಡುವೆ ಜಗಳವಾಗಿದೆ. ಈ ಸಂಬಂಧ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದು, ಜಗಳ ಬಿಡಿಸಲು ಹೋದ ಹಿರಿಯ ಸದಸ್ಯರಿಗೆ ಏಟು ಬಿದ್ದಿದೆ ಎಂದು ಹೇಳಲಾಗಿದೆ.
ಮಂಡಳಿಯ ಬೈಲಾದ ಪ್ರಕಾರ, ಕಾರ್ಯಕಾರಿ ಸಮಿತಿಗೆ ಒಂದು ವರ್ಷ ಮಾತ್ರ ಅಧಿಕಾರವಿರುತ್ತದೆ. ಇದನ್ನು ಕೆಲ ಸದಸ್ಯರು ಒಪ್ಪಿಕೊಂಡಿಲ್ಲ. ಒಂದು ವರ್ಷದ ಅವಧಿಯಲ್ಲಿ ಏನು ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಇನ್ನೊಂದು ಸದಸ್ಯರ ಗುಂಪು, ಕಾರ್ಯಕಾರಿ ಸಮಿತಿಗೆ ಎರಡು ವರ್ಷದ ಅಧಿಕಾರ ನೀಡಿದರೆ ಹೊಸಬರಿಗೆ ಅವಕಾಶ ಸಿಗೋದಿಲ್ಲ. ಈಗಾಗಲೇ ಮಂಡಳಿ ಕೆಲವರ ಸ್ವತ್ತಾಗಿದೆ ಎಂದಿದ್ದಾರೆ. ಇದು ಎರಡು ಗುಂಪುಗಳ ನಡುವೆ ಜಗಳಕ್ಕೆ ಕಾರಣವಾಗಿ ಹೊಡೆದಾಟಕ್ಕೆ ನಾಂದಿ ಹಾಡಿದೆ ಎಂದು ಹೇಳಲಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಯಮದ ಪ್ರಕಾರ ಕಾರ್ಯಕಾರಿ ಸಮಿತಿಯ ಸಭೆಯನ್ನು ಬೇರೆ ಕಡೆ ಮಾಡುವಂತಿಲ್ಲ. ಹೀಗಾಗಿ ಮಂಡಳಿಯಿಂದ ಈ ಸಭೆ ನೇರವಾಗಿ ಆಯೋಜನೆ ಆಗಿಲ್ಲ. ಪ್ರಾಯೋಜಕತ್ವವನ್ನು ಹಿಡಿದು ಗೋವಾಕ್ಕೆ ಟ್ರಿಪ್ ಆಯೋಜನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಕನ್ನಡ ಚಿತ್ರರಂಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಮಸ್ಯೆ ಪರಿಹರಿಸಬೇಕಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಮೋಜು ಮಸ್ತಿಯ ಜೊತೆಗೆ ಹೊಡೆದಾಟದಲ್ಲಿ ನಿರಂತರಾಗಿರುವುದು ಎಷ್ಟು ಸರಿ ಎಂದು ಸಿನಿಮಾಸಕ್ತರು ಪ್ರಶ್ನಿಸಿದ್ದಾರೆ.
__
Be the first to comment