ಹಾಸ್ಯ ನಟರಾಗಿ ಚಿತ್ರರಂಗದಲ್ಲಿ ಚಿರಪರಿಚಿತರಾಗಿರುವ ತರಂಗ ವಿಶ್ವ “ಗಿರ್ಕಿ” ಚಿತ್ರವನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ವಾಸುಕಿ ಭುವನ್ ಅವರು ವಿಶ್ವ ಅವರೊಂದಿಗೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
ಈ ಚಿತ್ರದ ಟೀಸರ್ ಈಗ ಎಲ್ಲೆಡೆ ಜನಪ್ರಿಯವಾಗಿದೆ. ವೀರೇಶ್ ಪಿ.ಎಂ. ನಿರ್ದೇಶನದ ಈ ಚಿತ್ರದ ಟೀಸರ್ ನಟ ಶರಣ್ ಅವರಿಂದ ಬಿಡುಗಡೆಯಾಗಿದೆ. ವಿಶ್ವ ನನ್ನ ಬಹುಕಾಲದ ಗೆಳೆಯ. ಇಬ್ಬರೂ ಸಾಕಷ್ಟು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಾಸ್ಯ ನಟನಾಗಿ ಚಿತ್ರರಂಗ ಪ್ರವೇಶಿಸಿ, ಈಗ ಚಿತ್ರ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆ. ಇದು ಸುಲಭ ಅಲ್ಲ. ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ. ನಾನು ನೂರು ಚಿತ್ರಗಳಲ್ಲಿ ನಟಿಸಿದ ಮೇಲೆ ನಿರ್ಮಾಪಕನಾದೆ. ವಿಶ್ವ ಕೂಡ ಅಷ್ಟೇ ಚಿತ್ರಗಳ ನಂತರ ನಿರ್ಮಾಪಕನಾಗಿದ್ದಾನೆ. ನಿರ್ದೇಶಕ ವೀರೇಶ್ ಕೂಡ ನನಗೆ ಪರಿಚಿತರು. ಚಿತ್ರತಂಡದ ಪರಿಶ್ರಮ ಟೀಸರ್ನಲ್ಲಿ ಎದ್ದುಕಾಣುತ್ತಿದೆ. ಒಳ್ಳೆಯದಾಗಲಿ ಎಂದು ಶರಣ್ ಹಾರೈಸಿದರು.
ನಮ್ಮ ಸ್ನೇಹಕ್ಕೆ ಬೆಲೆ ಕೊಟ್ಟು ಬಂದಿರುವ ಶರಣ್ಗೆ ಧನ್ಯವಾದ. ನನ್ನ ಈ ಬೆಳವಣಿಗೆಗೆ ನನ್ನ ತಂದೆಯ ಪ್ರೋತ್ಸಾಹ ಕಾರಣ. ನಿರ್ಮಾಣದ ಜೊತೆಗೆ ನಾನು ಪ್ರಮುಖ ಪಾತ್ರದಲ್ಲೂ ನಟಿಸಿದ್ದೇನೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲಾ ಅಂದುಕೊಂಡಂತೆ ಆದರೆ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು ವಿಶ್ವ.
“ಗಿರ್ಕಿ” ಎಂದರೆ ಸುತ್ತಾಟ ಅಥವಾ ಪರ್ಯಟನೆ. ಒಂದೇ ಥರಹದ ಕಥೆಯಲ್ಲ. ಲವ್, ಕಾಮಿಡಿ, ಕೌಟುಂಬಿಕ ಎಲ್ಲಾ ತರಹದ ಮಿಶ್ರಣ ಈ “ಗಿರ್ಕಿ”. ಹೆಚ್ಚಾಗಿ ಬೆಂಗಳೂರಿನಲ್ಲೇ ಚಿತ್ರೀಕರಣ ಮಾಡಿದ್ದೇವೆ. ಮೂರು ಹಾಡುಗಳಿವೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ನಾನು ಹಾಡುಗಳನ್ನು ಬರೆದಿದ್ದೇವೆ. ಚಿತ್ರ ಚೆನ್ನಾಗಿದೆ. ನೋಡಿ ಹರಸಿ ಎನ್ನುತ್ತಾರೆ ನಿರ್ದೇಶಕ ವೀರೇಶ್ ಪಿ.ಎಂ.
ಹಿಂದೆ ಇದೇ ಸಭಾಂಗಣದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ಚಿತ್ರವೊಂದರ ಸಮಾರಂಭ ನಡೆದಿತ್ತು. ಆ ತಂಡದವರು ನನ್ನನ್ನು ವೇದಿಕೆಗೆ ಕರೆಯದೆ ಅವಮಾನ ಮಾಡಿದ್ದರು. ಅದನ್ನು ಗಮನಿಸಿದ್ದ ವಿಶ್ವ ಅವರು, ನಿನ್ನನ್ನು ಹೀರೋ ಮಾಡುತ್ತೇನೆ ಎಂದಿದ್ದರು. ಅಂದಂತೆ ಈಗ ಹೀರೋ ಮಾಡಿದ್ದಾರೆ. ಅವರಿಗೆ ಹಾಗೂ ಇಡೀ ತಂಡಕ್ಕೆ ನಾನು ಆಭಾರಿ ಎಂದು ನಾಯಕ ವಿಲೋಕ್ ಹೇಳಿದ್ರು.
ನಾಯಕಿಯರಾದ ದಿವ್ಯ ಉರುಡುಗ ಹಾಗೂ ರಾಶಿ ಮಹದೇವ್ ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಸಂಗೀತದ ಬಗ್ಗೆ ವೀರ ಸಮರ್ಥ್ ಮಾತನಾಡಿದರು.
Be the first to comment