ಚಿತ್ರ: ಘಾರ್ಗಾ
ನಿರ್ದೇಶನ: ಎಂ. ಶಶಿಧರ್
ನಿರ್ಮಾಣ: ಅಶ್ವಿನಿ ರಾಮ್‌ಪ್ರಸಾದ್
ತಾರಾಗಣ: ಅರುಣ್ ರಾಮ್‌ಪ್ರಸಾದ್, ಸಾಯಿ ಕುಮಾರ್, ಅರುಣ್ ಸಾಗರ್, ಮಿತ್ರಾ, ರಿಹಾನ್ನಾ, ರಾಹುಲ್ ದೇವ್, ದೇವ್ ಗಿಲ್, ಸಂಪತ್ ರಾಜ್ ಮುಂತಾದವರು.
ರೇಟಿಂಗ್: 3/5
ದಟ್ಟ ಕಾಡಿನ ನಡುವೆ ಇರುವ “ಘಾರ್ಗಾ” ಕುಗ್ರಾಮಕ್ಕೆ ಪುಸ್ತಕ ಸಂಶೋಧನೆ ವಿಚಾರಕ್ಕಾಗಿ ಬರುವ ವಿಕ್ರಂ ಅಡಿಗ (ಅರುಣ್ ರಾಮಪ್ರಸಾದ್) ವಾಹನ ಚಾಲಕನಾಗಿ ಪುಂಡಲಿಕ (ಅರುಣ್ ಸಾಗರ್) ಜೊತೆ ಇರುತ್ತಾನೆ.
ಒಂದು ಕಾಲ್ಪನಿಕ ಊರು. ಅಲ್ಲಿ ಬಳಸುವ ಭಾಷೆಯಿಂದಾಗಿ, ಸಂಸ್ಕೃತಿಯಿಂದಾಗಿ ಕುಂದಾಪುರ ಕಡೆಯ ಊರೆಂಬ ಭಾವನೆ ಮೂಡುತ್ತದೆ. ಆದರೆ ಎಲ್ಲಿಯೂ ಇಂಥದ್ದೆ ಪ್ರಾಂತ್ಯಕ್ಕೆ ಸೇರಿರುವ ಊರು ಎಂಬುದನ್ನು ಕಥೆಯಲ್ಲಿ ಹೇಳುವುದಿಲ್ಲ. ಆ ಊರಿನಲ್ಲಿ ನಡೆಯುವ ವಿಸ್ಮಯಕಾರಿ ಘಟನೆಗಳೇ ಚಿತ್ರದ ಒಟ್ಟಾರೆ ಕಥೆ. ಮೊದಲು ಹಾರರ್ ಸಿನಿಮಾ ಎನಿಸುವ ಚಿತ್ರ ಹಲವು ತಿರುವುಗಳನ್ನು ಪಡೆದುಕೊಳ್ಳುವ ಕಥೆ ಕೊನೆತನಕ ಕುತೂಹಲ ಉಳಿಸಿಕೊಳ್ಳುತ್ತದೆ.
(ಅರುಣ್ ರಾಮಪ್ರಸಾದ್) ನಾಯಕ ವಿಕ್ರಮ್ ಅಡಿಗ ಒಂದು ಪುಸ್ತಕವನ್ನು ಹುಡುಕಿಕೊಂಡು ‘ಘಾರ್ಗಾ’ದ ಗಜಾನನ ಐತಾಳರ ಮನೆಗೆ ಬರುತ್ತಾನೆ. ಮೊದಲನೆಯದಾಗಿ ಇದು ಈ ರೀತಿಯ ಕಥೆಯಾಗಿರಬಹುದೆಂಬ ಯಾವ ಸುಳಿವೂ ಸಿಗುವುದಿಲ್ಲ. ಆದರೆ ಈ ಊರಿಗೆ ಬರುವ ದಾರಿಯಲ್ಲಿ ನಡೆಯುವ ಕೆಲವು ಘಟನೆಗಳಿಂದ ಇದೊಂದು ಹಾರರ್ ಸಿನಿಮಾವ ಎಂದು ಶುರುವಾಗುತ್ತದೆ. ಪ್ರೇಕ್ಷಕರನ್ನು ಭಯಗೊಳಿಸುವ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ನಿರ್ದೇಶಕ (ಎಂ ಶಶಿಧರ್)
ಯಶಸ್ವಿಯಾಗಿದ್ದಾರೆ.
ಈ ಚಿತ್ರದ ಇಡೀ ಕಥೆ ನಡೆಯುವುದು ಗಜಾನನ ಐತಾಳರ ಮನೆಯಲ್ಲಿ. ಗಜಾನನ ಐತಾಳರ ತಂದೆ ಮಹಾಬಲ ಐತಾಳರು ಸಾಹಿತಿಯಾಗಿರುತ್ತಾರೆ. ಅವರು ಬರೆದ ಪುಸ್ತಕವೊಂದನ್ನು ಹುಡುಕಿಕೊಂಡು ನಾಯಕ ಅಲ್ಲಿಗೆ ಬಂದಿರುತ್ತಾನೆ. ಐತಾಳರ ಮನೆ, ಪರಿಸರ, ಅಲ್ಲಿನ ಪಾತ್ರಗಳ ಪರಿಚಯಕ್ಕೆ ನಿರ್ದೇಶಕ ತುಸು ಸಮಯ ತೆಗೆದುಕೊಳ್ಳುತ್ತಾರೆ. ಭಯದ ಸನ್ನಿವೇಶಗಳ ಜತೆ ಒಂದಷ್ಟು ಹಾಸ್ಯವನ್ನು ಬೆರೆಸಿ ಮೊದಲಾರ್ಧ ಮುಗಿಯುವ ಹೊತ್ತಿಗೆ ಈ ಕಥೆಗೊಂದು ಒಳ್ಳೆಯ ತಿರುವು ಸಿಕ್ಕಿರುತ್ತದೆ.
ಐತಾಳರಾಗಿ ನಟಿಸಿರುವ ನಟ ಸಾಯಿಕುಮಾರ್ ಚಿತ್ರದ ದೊಡ್ಡ ಶಕ್ತಿ. ಅವರು ಚಿತ್ರದ ನಾಯಕನಿಗಿಂತ ಹೆಚ್ಚು ಪ್ರಾಮುಖ್ಯ ನೀಡಿರುವುದು ಚಿತ್ರದ ಸಣ್ಣಪುಟ್ಟ ಲೋಪಗಳನ್ನು ಮರೆಮಾಚುತ್ತದೆ.
ಕುಂದಾಪುರ ಕಡೆಯ ಕೃಷಿಕನಾಗಿ ಸಾಯಿಕುಮಾರ್ ಪಾತ್ರದಲ್ಲಿ ಅದ್ಬುತವಾಗಿ ಅಭಿನಯಿಸಿದ್ದಾರೆ. ಅವರನ್ನು ರಗಡ್, ಖಡಕ್ ಪಾತ್ರಗಳಲ್ಲಿ ನೋಡಿದವರಿಗೆ ಇಲ್ಲೊಂದು ಅಚ್ಚರಿಯಿದೆ. ಅದನ್ನು ಚಿತ್ರದಲ್ಲಿಯೇ ನೋಡಬೇಕು. ವಿಕ್ರಮ್ ಅಡಿಗನಾಗಿ ಅರುಣ್ ರಾಮಪ್ರಸಾದ್ ಅವರದ್ದು ಮೊದಲ ಸಿನಿಮಾ ಎನ್ನಿಸುವುದಿಲ್ಲ.
ಮೊದಲಿಗೆ ಅತಿಯಾದ ಹಾಸ್ಯದಿಂದ ಹಿಂಸೆ ಎನಿಸುವ ಅರುಣ್ ಸಾಗರ್ ಪಾತ್ರ ಕೂಡ ಒಳ್ಳೆಯ ತಿರುವು ಪಡೆದುಕೊಳ್ಳುತ್ತದೆ. ಹೀಗಾಗಿ ಚಿತ್ರದ ಮೊದಲಾರ್ಧ ಮುಗಿದಿದ್ದೇ ತಿಳಿಯುವುದಿಲ್ಲ. ಆದರೆ ದ್ವಿತೀಯಾರ್ಧದ ಕಥೆಯನ್ನು ಸ್ವಲ್ಪ ಬಿಗಿಗೊಳಿಸುವ ಅವಕಾಶ ನಿರ್ದೇಶಕರಿಗಿತ್ತು. ಎಐ ದೃಶ್ಯಗಳನ್ನು ಬಳಸಿಕೊಂಡು ಪುರಾಣದ ಕಥೆಯನ್ನು ಮುಖ್ಯಕಥೆಯಲ್ಲಿ ಸೇರಿಸುವ ಸನ್ನಿವೇಶಗಳ ವೇಗ ಪಡೆಯುತ್ತಿದೆ. ಗುರುಕಿರಣ್ ಹಿನ್ನೆಲೆ ಸಂಗೀತ ಸನ್ನಿವೇಶಗಳಿಗೆ ಸೂಕ್ತವಾಗಿದೆ. ಭಯಮೂಡಿಸಲೆಂದು ನೀಡಿರುವ ಹಿನ್ನೆಲೆ ಸಂಗೀತದ ಅದ್ಬುತವಾಗಿದೆ.





Be the first to comment