ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ನಟಿ ಜಾರ್ಜಿಯಾ ಆಂಡ್ರಿಯಾನಿ ಎಂಟ್ರಿ ನೀಡಿದ್ದಾರೆ.
ಮಾರ್ಟಿನ್ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟ ತಲುಪಿದ್ದು, ಇತ್ತೀಚೆಗೆ ಚಿತ್ರತಂಡ ಚಿತ್ರದ ಹಾಡೊಂದರ ಚಿತ್ರೀಕರಣ ಮಾಡಿತು. ಹಾಡಿನಲ್ಲಿ ಜಾರ್ಜಿಯಾ ಆಂಡ್ರಿಯಾನಿ ನೃತ್ಯ ಮಾಡಿದ್ದು, ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ಹಾಡಿನ ಚಿತ್ರೀಕರಣವನ್ನು ಹೈದರಾಬಾದ್ ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ನಡೆಸಲಾಯಿತು. ಇಮ್ರಾನ್ ಸರ್ಧಾರಿಯಾ ನೃತ್ಯ ನಿರ್ದೇಶನ ಮಾಡಿದ್ದು, ಹಾಡಿನಲ್ಲಿ ಜಾರ್ಜಿಯಾ ಜೊತೆಗೆ ನಾಯಕ ನಟ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ.
ಹಾಡಿನಲ್ಲಿ 350 ವಿದೇಶಿ ನೃತ್ಯಗಾರರು, ಹೈಟೆಕ್ ಉಪಕರಣಗಳನ್ನು ಬಳಕೆ ಮಾಡಿದ್ದು, ಸುಮಾರು 3.5 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಎರಡು ಹಾಡಿನ ಚಿತ್ರೀಕರಣವನ್ನು ಚಿತ್ರತಂಡ ನಡೆಸುತ್ತಿದ್ದು, ಅಕ್ಟೋಬರ್ 7ರ ಮೊದಲೇ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ನಿರ್ಧರಿಸಿದೆ.
ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅನ್ವೇಶಿ ಜೈನ್, ಸುಕೃತಾ ವಾಗ್ಲೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಉದಯ್ ಕೆ ಮೆಹ್ತಾ ಅವರು ವಾಸವಿ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಣಿ ಶರ್ಮಾ ಸಂಗೀತ ಸಂಯೋಜನೆ, ರವಿ ಬಸ್ರೂರ್ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ.
ಸತ್ಯ ಹೆಗಡೆ ಛಾಯಾಗ್ರಹಣ, ಸ್ಟಂಟ್ ಕೊರಿಯೋಗ್ರಾಫರ್ ಗಳಾದ ರಾಮ್-ಲಕ್ಷ್ಮಣ್ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
___

Be the first to comment