ಟಿ.ಎಸ್. ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ನಿರ್ದೇಶನದ ಮೊದಲ ಚಿತ್ರ “ಜೀನಿಯಸ್ ಮುತ್ತ” ಆಗಸ್ಟ್ ನಲ್ಲಿ ತೆರೆಗೆ ಬರಲಿದೆ.
ಜಿ.ಎಸ್ ಲತಾ ಜೈಪ್ರಕಾಶ್ ನಿರ್ಮಾಣದ ಈ ಚಿತ್ರದಲ್ಲಿ “ಜೀನಿಯಸ್ ಮುತ್ತ” ನಾಗಿ ಮಾಸ್ಟರ್ ಶ್ರೇಯಸ್ಸ್ ಜೈಪ್ರಕಾಶ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ “ಚಿನ್ನಾರಿಮುತ್ತ” ವಿಜಯ ರಾಘವೇಂದ್ರ ಅಭಿನಯಿಸಿದ್ದಾರೆ.
”ನನಗೆ ಹಲವು ವರ್ಷಗಳಿಂದ ನಿರ್ದೇಶನ ಮಾಡುವಂತೆ ಎಲ್ಲರೂ ಹೇಳುತ್ತಿದ್ದರು. ಆಗಿರಲಿಲ್ಲ. ಲತಾ ಅವರು ತಮ್ಮ ಮಗನ ಚಿತ್ರವನ್ನು ನೀವೇ ನಿರ್ದೇಶಿಸಬೇಕೆಂದರು. ಅವರ ಒತ್ತಾಯಕ್ಕೆ ಮಣಿದು ನನ್ನ ಸ್ನೇಹಿತರ ತಂಡದೊಂದಿಗೆ ಈ ಚಿತ್ರದ ಕಥೆ ಸಿದ್ದ ಮಾಡಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಹೆಚ್ಚಾಗಿ ಬಿಳಿಗಿರಿರಂಗನ ಬೆಟ್ಟದಲ್ಲಿ ನಡೆದಿದೆ. ಮಾಸ್ಟರ್ ಶ್ರೇಯಸ್ಸ್, ವಿಜಯ ರಾಘವೇಂದ್ರ, ಟಿ.ಎಸ್.ನಾಗಾಭರಣ, ಗಿರಿಜಾ ಲೋಕೇಶ್,ಸುಂದರರಾಜ್, ಪನ್ನಗಾಭರಣ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಗೂ ವಿದೇಶಗಳಲ್ಲಿ ನಮ್ಮ ಚಿತ್ರದ ಪ್ರದರ್ಶನವಾಗಿದೆ. ನೋಡಿದವರು ಮೆಚ್ಚುಗೆ ಮಾತುಗಳಾಡಿದ್ದಾರೆ. ಆಗಸ್ಟ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ” ಎಂದು ನಿರ್ದೇಶಕಿ ನಾಗಿಣಿ ಭರಣ ತಿಳಿಸಿದ್ದಾರೆ.
”ನಾನು ಭರಣ ಸರ್ ಅವರ ಬಳಿ ನಟನೆ ಕಲಿತಿದ್ದೇನೆ. ಆನಂತರ ಅಮ್ಮನಿಗೆ ನಾನು ನಟಿಸಬೇಕೆಂದು ಆಸೆಯಾಯಿತು. ಈ ಚಿತ್ರದಲ್ಲಿ “ಜೀನಿಯಸ್ ಮುತ್ತ”ನಾಗಿ ಅಭಿನಯಿಸಿದ್ದೇನೆ. ಅವಕಾಶ ನೀಡಿದ ಅಮ್ಮನಿಗೆ ಹಾಗೂ ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ” ಎಂದರು ಮಾಸ್ಟರ್ ಶ್ರೇಯಸ್ಸ್.
”ನಾನು ಯಾವಾಗಲೂ ನಾಗಾಭರಣ್ ಸರ್ ಅವರಿಗೆ ಆಬಾರಿ. ನನ್ನನ್ನು ಎಲ್ಲರು ವಿಜಯ ರಾಘವೇಂದ್ರ ಅನ್ನುವುದಕ್ಕಿಂತ ಚಿನ್ನಾರಿಮುತ್ತ ಎನ್ನುವುದೇ ಹೆಚ್ಚು. ಸೂಪರ್ ಹಿಟ್ ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದವರು ನಾಗಾಭರಣ್ ಸರ್. ಈಗ ನಾಗಿಣಿ ಭರಣ ಅವರ ಮೊದಲ ನಿರ್ದೇಶನದಲ್ಲೂ ನಾನು ನಟಿಸಿರುವುದು ಖುಷಿಯಾಗಿದೆ” ಎಂದು ವಿಜಯ ರಾಘವೇಂದ್ರ ತಿಳಿಸಿದ್ದಾರೆ.
”ನಾಗಿಣಿ ಭರಣ ಅವರು ನನಗೆ ಹತ್ತು ವರ್ಷಗಳ ಪರಿಚಯ. ನನ್ನ ಮಗನಿಗಾಗಿ ಒಂದೊಳ್ಳೆ ಕಥೆ ಮಾಡಿ ನೀವೇ ನಿರ್ದೇಶನ ಮಾಡಬೇಕೆಂದು ನಾಗಿಣಿ ಭರಣ ಅವರ ಬಳಿ ಹೇಳಿದೆ. ಅವರು ಒಳ್ಳೆಯ ಕಥೆ ಸಿದ್ದ ಮಾಡಿಕೊಂಡು ನನಗೆ ಕಥೆ ಹೇಳಿದರು. ನಂತರ “ಜೀನಿಯಸ್ ಮುತ್ತ” ಚಿತ್ರ ಆರಂಭವಾಯಿತು. ಈಗ ಬಿಡುಗಡೆ ಹಂತ ತಲುಲಿದೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ” ಎಂದರು ನಿರ್ಮಾಪಕಿ ಲತಾ ಜೈಪ್ರಕಾಶ್.
ಚಿತ್ರದಲ್ಲಿ ನಟಿಸಿರುವ ಗಿರಿಜಾ ಲೋಕೇಶ್, ಪನ್ನಗಾಭರಣ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಚಿತ್ರತಂಡದ ಅನೇಕ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment