ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ ಸಿನಿಮಾ ಜುಲೈ ತಿಂಗಳಿನಲ್ಲಿ ತೆರೆಗೆ ಬರಲಿದೆ.
ಗೌರಿ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್ ಹಾಗೂ ಸಾನ್ಯಾ ಅಯ್ಯರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಇಬ್ಬರಿಗೂ ಮೊದಲನೆಯ ಸಿನಿಮಾ ಆಗಿದೆ.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಇಂದ್ರಜಿತ್ ಲಂಕೇಶ್ ಅವರು, ಅಕ್ಕನ ನೆನಪಿನಲ್ಲಿ ಸಿನಿಮಾಗೆ ಗೌರಿ ಟೈಟಲ್ ಇಡಲಾಗಿದೆ. ಈ ಸಿನಿಮಾ ನನ್ನ ಸಿನಿ ಜೀವನದಲ್ಲಿ ದೊಡ್ಡ ಬಜೆಟ್ ಸಿನಿಮಾ ಆಗಿದೆ. ನೈಜ ಘಟನೆ ಆಧರಿಸಿ ಸಿನಿಮಾ ಮಾಡಲಾಗಿದೆ ಎಂದರು.
ಚಿತ್ರವನ್ನು ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಕಥೆ ಇಲ್ಲಿಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಗೆ ಈ ಹೆಸರು ಇಡಲಾಗಿದೆ ಎಂದರು.
ಸಮರ್ಜಿತ್ ಮಾತನಾಡಿ, ನಾನು ಚಿಕ್ಕ ವಯಸ್ಸಿನಿಂದ ಪುನೀತ್, ಸುದೀಪ್ ಅವರ ಸಿನಿಮಾ ನೋಡಿ ಅವರಂತೆ ಸಿನಿಮಾದಲ್ಲಿ ಕೆಲಸ ಮಾಡಬೇಕು ಅಂದುಕೊಂಡಿದ್ದೆ. ಈ ಚಿತ್ರದಲ್ಲಿ ನಟಿಸುವ ಮುನ್ನ ನಟನೆ, ನಿರ್ದೇಶನ, ಫೈಟ್, ಡಾನ್ಸ್ ಬಗ್ಗೆ ದೇಶ ಹಾಗೂ ವಿದೇಶಗಳಲ್ಲಿ ತರಬೇತಿಯನ್ನು ಪಡೆದಿದ್ದೇನೆ ಎಂದರು. ಚಿತ್ರದ ನಾಯಕಿ ಸಾನ್ಯಾ ಅಯ್ಯರ್ ಇದ್ದರು.
ಪತ್ರಿಕಾಗೋಷ್ಠಿಯಲ್ಲಿ ನಟ ದರ್ಶನ್ ಬಂಧನವಾಗಿರುವ ಬಗ್ಗೆ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪ್ರಕರಣದಲ್ಲಿ ಎಫ್ಐಆರ್ ಆಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಹಂತದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದರು.
ಡಾ.ರಾಜ್, ಲಂಕೇಶ್ ಸೇರಿದಂತೆ ಅನೇಕರು ಎಪ್ಪತ್ತರ ದಶಕದಲ್ಲಿ ಹಾಕಿದ ಅಡಿಪಾಯ ಕನ್ನಡ ಚಿತ್ರರಂಗಕ್ಕೆ ಇದೆ. ಅದನ್ನು ಉಳಿಸಿಕೊಂಡು ಹೋಗಬೇಕು. ಯಶಸ್ಸು ಸಿಕ್ಕಿದ ಕೂಡಲೇ ಕಳೆದು ಹೋಗಬಾರದು ಎಂದು ಲಂಕೇಶ್ ಯುವಕಲಾವಿದರಿಗೆ ಸಲಹೆ ನೀಡಿದರು.
___
Be the first to comment