‘ಗರುಡ’ಕ್ಕೆ ಬೇರೆ ಭಾಷೆಯಿಂದ ಬೇಡಿಕೆ

“ಗರುಡ ಗಮನ, ವೃಷಭ ವಾಹನ ಚಿತ್ರಕ್ಕೆ ಬೇರೆ ಭಾಷೆಗಳಿಂದ ಡಬ್ಬಿಂಗ್ ರೈಟ್ಸ್​, ರಿಮೇಕ್​​ಗೆ ಬೇಡಿಕೆ ಬರುತ್ತಿದೆ” ಎಂದು ನಿರ್ದೇಶಕ ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
“ಮುಂದಿನ ವಾರದಲ್ಲಿ ಈ ಬಗ್ಗೆ ಮಾತುಕತೆ ನಡೆಯಲಿದೆ” ಎಂದು ಅವರು ತಿಳಿಸಿದ್ದಾರೆ.

” ನಾವು ಬಹಳಷ್ಟು ಕಷ್ಟಪಟ್ಟು ಚಿತ್ರವನ್ನು ತಯಾರು ಮಾಡಿದ್ದೇವೆ. ಕೆಲ ವ್ಯಕ್ತಿಗಳು ಮೊಬೈಲ್​​ನಲ್ಲಿ ಶೂಟಿಂಗ್ ಮಾಡಿ ಪೈರಸಿ ಮಾಡಿ ಮಾಡಿಬಿಟ್ಟಿದ್ದು ನಮ್ಮ ಗಮನಕ್ಕೆ ಬಂದಿದೆ. ಚಿತ್ರ ಬಿಡುಗಡೆಗೆ ಮುನ್ನವೇ ನಾವು ಕಾನೂನು ರೀತಿಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಪೈರಸಿ ಚಿತ್ರಗಳನ್ನು ನೋಡಬೇಡಿ. ಥಿಯೇಟರ್​​ಗೆ ಬಂದು ಶ್ರಮಕ್ಕೆ ಬೆಂಬಲ ಕೊಡಿ”ಎಂದು ರಾಜ್ ಶೆಟ್ಟಿ ಕೋರಿದ್ದಾರೆ.

ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡಿರುವ ನಟ ರಿಷಬ್ ಶೆಟ್ಟಿ, “ಚಿತ್ರ ಆಂಧ್ರಪ್ರದೇಶದಲ್ಲಿ ಹೌಸ್ ಫುಲ್ ಪ್ರದರ್ಶನ ಆಗುತ್ತಿರುವುದು ದೊಡ್ಡ ಸಾಧನೆ ಅನಿಸುತ್ತಿದೆ. ಬೆಂಗಳೂರು, ಮೈಸೂರು, ಕರಾವಳಿಯಲ್ಲಿ ಚಿತ್ರ ಹೌಸ್​​ಫುಲ್ ಪ್ರದರ್ಶನ ಆಗುತ್ತಾ ಇದೆ. ಜನ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ವಿಭಿನ್ನ ರೀತಿಯ ಚಿತ್ರವನ್ನು ಇಷ್ಟಪಡುತ್ತಾರೆ ಎನ್ನುವುದು ಸಾಭೀತಾಗಿದೆ” ಎಂದು ಹೇಳಿದ್ದಾರೆ.

“ಮುಂದಿನ ಪ್ರಾಜೆಕ್ಟ್ ಬಗ್ಗೆ ಈಗ ಯಾವುದೇ ಯೋಚನೆ ಇಲ್ಲ. 15 ದಿನ ರಿಲೀಫ್ ಮಾಡಿಕೊಳ್ಳಬೇಕಾಗಿದೆ” ಎಂದು ರಾಜ್ ಶೆಟ್ಟಿ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ‘ಪರಂವಃ’ ಸ್ಟುಡಿಯೋಸ್ ಈ ಚಿತ್ರವನ್ನು ಪ್ರಸ್ತುತಪಡಿಸಿದೆ. ಕಾರ್ತಿಕ್ ಗೌಡ ಅವರ ಕೆಆರ್‌ಜಿ ಸ್ಟುಡಿಯೋಸ್ ಮೂಲಕ ಚಿತ್ರ ಹಂಚಿಕೆ ಮಾಡಲಾಗಿದ್ದು, ಚಿತ್ರಕ್ಕೆ ಮಿಥುನ್ ಮುಕುಂದನ್ ಅವರ ಸಂಗೀತವಿದೆ.

ಸಿನಿಮಾದಲ್ಲಿ ರಾಜ್ ಬಿ. ಶೆಟ್ಟಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಡೆಯುವ ಕಥೆಯಲ್ಲಿ ಹರಿ ಮತ್ತು ಶಿವ ಎಂಬ ಎರಡು ಪಾತ್ರಗಳಿದ್ದು ಇದರಲ್ಲಿ ರಾಜ್ ಬಿ. ಶೆಟ್ಟಿ ಹಾಗೂ ವೃಷಬ್ ಶೆಟ್ಟಿ ಅವರು ನಟಿಸಿದ್ದಾರೆ.

ಮುಂಗೋಪ, ಹಿಂಸೆಗೆ ಹಿಂಜರಿಯದ ಶಿವನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ, ಹರಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದಾರೆ. ಕರಾವಳಿ ಭಾಗದ ಗ್ಯಾಂಗ್ ಸ್ಟರ್ ಕತೆಯನ್ನು ಸಿನಿಮಾ ಹೊಂದಿದ್ದು, ಕರಾವಳಿ ಸಂಸ್ಕೃತಿ ಇಲ್ಲಿ ಅನಾವರಣ ಆಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!