‘ಹಣ ಕಂಡರೆ ಹೆಣ ಕೂಡ ಬಾಯಿಬಿಡುತ್ತೆ ‘ ಎಂಬ ಗಾದೆ ಮಾತು ‘ಆ ಒಂದು ನೋಟು’ ಚಿತ್ರದ ಕತೆಗೆ ತಾಳೆಯಾಗುತ್ತದೆ. ಗರಿಷ್ಟ ಎರಡು ಸಾವಿರ ನೋಟಿನ ಕೊನೆ ಸಂಖ್ಯೆ 102102 ಯಾರತ್ರಾ ಹೋಗುತ್ತದೆ. ಹೇಗೆಲ್ಲಾ ಬಳಕೆಯಾಗುತ್ತದೆ. ನೋಟು ವ್ಯಕ್ತಿಯ ಬಳಿ ಸಿಕ್ಕಾಗ ಅವರ ವ್ಯಕ್ತಿತ್ವ ಹೇಗೆ ಬದಲಾಗುತ್ತದೆ. ನೋಟು ಎಲ್ಲಾ ಜನರ ಹತ್ತಿರ ಪ್ರಯಾಣ ಮಾಡಿದಾಗ ಆಯಾ ಪಾತ್ರಗಳು ಅವರದೇ ಕೋನಗಳಲ್ಲಿ ಯಾವ ರೀತಿ ಅನಾವರಣಗೊಳ್ಳುತ್ತದೆ ಎಂಬ ಅಂಶಗಳು ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕಾಸಿಕ್ಕೆ ತಕ್ಕಂತೆ 85 ಕಲಾವಿದರು ನಟನೆ ಮಾಡಿರುವುದು ವಿಶೇಷ. ಇದರಲ್ಲಿ ಮುಖ್ಯ ಪಾತ್ರಗಳ ಪೈಕಿ ಕಾಲೇಜು ಹುಡುಗನಾಗಿ ಇದು ಸಿಕ್ಕಾಗ ಏನು ಮಾಡುತ್ತಾನೆ ಎನ್ನುವ ಆದಿತ್ಯಾಶೆಟ್ಟಿ, ಬಾರ್ ಮಾಲೀಕನಾಗಿ ಗೌತಂ, ಲಾರಿ ಚಾಲಕನಾಗಿ ಅಶ್ವಿನ್ಹಾಸನ್, ಕಳ್ಳನಾಗಿ ಆನಂದ್, ದುರಾಸೆ, ಗಯ್ಯಾಳಿ ಹೆಂಡತಿಯಾಗಿ ಉಷಾರವಿಶಂಕರ್, ಸದಾ ಕಾಲ ಸ್ವತಂತ್ರ ಬಯಸುವ ಕಾಲೇಜು ಹುಡುಗಿ ಮೇಘಾ, ಸಹಾಯಕನಾಗಿ ಸುನಿಲ್ಕುಲಕರ್ಣಿ, ಅತಿಥಿಯಾಗಿ ಸಾಕ್ಷಿ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇವರ ಜೊತೆಯಲ್ಲಿ ವಿಧುವೆ ತಾಯಿ, ಶ್ರೀಮಂತ, ವ್ಯಾಪಾರಸ್ತ, ಕ್ಲಬ್ ಒಡೆಯ ಪಾತ್ರಗಳು ಬಂದು ಹೋಗುತ್ತದೆ. ಯಾವುದೇ ಜಾನರ್ಗೆ ಸೇರದೆ ಇದ್ದರೂ, ಸನ್ನಿವೇಶಗಳು ಎಲ್ಲಾ ಜಾನರ್ಗಳ ಅಂಶಗಳನ್ನು ಅಳವಡಿಸಿಕೊಂಡಿದೆಯಂತೆ. ರಚನೆ,ಚಿತ್ರಕತೆ, ನಿರ್ದೇಶನ ಮಾಡಿರುವ ರತ್ನಾತನಯ್ 2011ರಲ್ಲಿ ಕತೆ ಬರೆದಾಗ ಅಂದು ಒಂದು ಸಾವಿರದ ನೋಟು ಚಾಲ್ತಿಯಲ್ಲಿತ್ತು. ಈಗ ಅದು ನಿಷೇದವಾಗಿರುವುದರಿಂದ ಎರಡು ಸಾವಿರದ ನೋಟು ಕತೆಗೆ ಬಳಸಲಾಗಿದೆ. ಹಣಕ್ಕೆ ಹೊಂದಿಕೆಯಾಗುವಂತೆ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಡಿಕೆ ಜಲಪಾತ, ದೊಡ್ಡಬಳ್ಳಾಪುರ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕೆ.ಕಲ್ಯಾಣ್ ಸಾಹಿತ್ಯದ ಮೂರು ಗೀತೆಗಳಿಗೆ ಕೌಶಿಕ್ ಸಂಗೀತ ಸಂಯೋಜಿಸಿದ್ದು, ಈ ಪೈಕಿ ದ.ರಾ.ಬೇಂದ್ರ ವಿರಚಿತ ‘ಕುರುಡ ಕಾಂಚಾಣ’ ಗೀತೆಯನ್ನು ಕಲಾವತಿಪುತ್ರನ್ ಅವರಿಂದ ಹಾಡಿಸಲಾಗಿದೆ. ಹಿನ್ನಲೆ ಸಂಗೀತವನ್ನು ವೀರ್ಸಮರ್ಥ್ ನಿಭಾಯಿಸಿದ್ದಾರೆ.
ಛಾಯಾಗ್ರಹಣ ರವಿಮರ್ವ, ಸಂಕಲನ ಅರ್ಜುನ್ಕಿಟ್ಟು, ನೃತ್ಯ ಹೈಟ್ಮಂಜು ಅವರದಾಗಿದೆ. ಸುಮಾರು 25 ಚಿತ್ರಗಳಲ್ಲಿ ಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದ್ದ ಎಂ.ಕೆ.ಜಗದೀಶ್ ಮತ್ತು ಜಿ,ಪ್ರೇಮನಾಥ್ ಜಂಟಿಯಾಗಿ ಫ್ರೆಂಡ್ಸ್ ಫಿಲಿಂ ಫ್ಯಾಕ್ಟರಿ ಮೂಲಕ ಸಿನಿಮಾ ಕೃಷಿಗೆ ಬಂಡವಾಳ ಹೂಡಿರುವುದು ಹೊಸ ಅನುಭವ. ಸದ್ಯದಲ್ಲೆ ಚಿತ್ರವು ಸೆನ್ಸಾರ್ ಪ್ರಾಂಗಣಕ್ಕೆ ಹೋಗಲಿದ್ದು, ಮುಂದಿನ ತಿಂಗಳು ತೆರೆಕಾಣುವ ಸಾದ್ಯತೆ ಇದೆ.
Be the first to comment