garadi: ಗರಡಿ ಚಿತ್ರದ ಟ್ರೈಲರ್ ಬಿಡುಗಡೆ

ಯೋಗರಾಜ್ ಭಟ್ ನಿರ್ದೇಶನದ  ಬಹುನಿರೀಕ್ಷಿತ ‘ಗರಡಿ’ ಚಿತ್ರದ ಟ್ರೈಲರ್​ನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು‌.

ಹಾವೇರಿಯ ರಾಣೆಬೆನ್ನೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ದರ್ಶನ್, ”ಆಕ್ಷನ್, ಲವ್, ಕುಸ್ತಿ  ಗರಡಿಯಲ್ಲಿದೆ. ಈ ಚಿತ್ರವನ್ನು ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡುವ ಮೂಲಕ ನಮಗೆ ಅನ್ನದಾತರಾಗಬೇಕು” ಎಂದು ಹೇಳಿದರು.

”ಎಲ್ಲ ಯುವಕರಿಗೆ ಹೇಳುವುದು ಜೀವನದಲ್ಲಿ ತಾಳ್ಮೆ ಇರಬೇಕು. ನಮ್ಮ ಹೀರೋ ಯಶಸ್ ಸೂರ್ಯ ಸಹ ಜೀವನದಲ್ಲಿ ಏನೂ ಆಗುತ್ತಿಲ್ಲ ಅಂದುಕೊಳ್ಳುತ್ತಿದ್ದರು. ಆದರೆ ಅವರ ಟೈಮ್ ಬಂದಿರಲಿಲ್ಲ. ಅದಕ್ಕಾಗಿ ಕಾದರು. ಹಾಗೆಯೇ ಯುವಕರು ಸಹ ಸಮಯಕ್ಕಾಗಿ ಕಾಯಬೇಕು. ಅದಕ್ಕೆ ತಾಳ್ಮೆ ಬೇಕು. ತಾಳಿದರೆ ವಯಸ್ಸಾಗುತ್ತದೆ ಎಂದುಕೊಳ್ಳಬಹುದು. ಆದರೆ ಅದು ಹಾಗಾಗುವುದಿಲ್ಲ. ತಾಳ್ಮೆ ಬಹಳ ಮುಖ್ಯ” ಎಂದರು ದರ್ಶನ್.

”ಯಶಸ್ ಸೂರ್ಯ ಅವರನ್ನು ಬಹಳ ವರ್ಷಗಳಿಂದ ನಾನು ನೋಡುತ್ತಲೇ ಬಂದಿದ್ದೇನೆ. ಅವರು ನನ್ನ ಜೊತೆಗೆ ‘ಚಿಂಗಾರಿ’ ಸಿನಿಮಾದಲ್ಲಿ ನಟಿಸಿದರು. ಬಳಿಕ ನನ್ನೊಟ್ಟಿಗೆ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೆ ಅವರು ತಮ್ಮ ಶ್ರಮ ಬಿಟ್ಟಿರಲಿಲ್ಲ. ಈಗ ಅವರಿಗಾಗಿ ‘ಗರಡಿ’ ಸಿನಿಮಾ ಬಂತು. ಹಾಗೆಯೇ ಪ್ರತಿಯೊಬ್ಬರಿಗೂ ಒಂದೊಂದು ಸಮಯ ಎಂದು ಬಂದೇ ಬರುತ್ತದೆ. ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕಷ್ಟೆ’ ಎಂದರು.

ಸೋನಲ್ ಮೊಂಟಾರೊ ಬಗ್ಗೆ ಮಾತನಾಡಿದ ದರ್ಶನ್, ”ಸೋನಲ್ ನಮ್ಮ ಜೊತೆಗಿನ ಗೆಳೆಯರ ರೀತಿಯೇ. ನನ್ನ ಗೆಳೆಯರ ಗುಂಪಿನಲ್ಲಿ ಅವರೂ ಒಬ್ಬರು. ಅವರು ಹುಡುಗಿ ಎಂದು ಅನ್ನಿಸುವುದೇ ಇಲ್ಲ, ಹುಡುಗನ ರೀತಿಯೇ ನಮ್ಮೊಟ್ಟಿಗೆ ಆತ್ಮೀಯವಾಗಿ ಬೆರೆಯುತ್ತಾರೆ. ಈ ಸಿನಿಮಾದಲ್ಲಿ ಬಹಳ ಚೆನ್ನಾಗಿ ನಟಿಸಿದ್ದಾರೆ” ಎಂದು ತಮಾಷೆ ಮಾಡಿದರು.

ಸೂರ್ಯ, ಸೋನಾಲ್ ಮಾಂಟೆರೊ, ಬಿ.ಸಿ. ಪಾಟೀಲ್ ಜೊತೆಗೆ ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್, ನಯನ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಿಶ್ವಿಕಾ ನಾಯ್ಡು ಸ್ಪೆಷಲ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

ಸೌಮ್ಯ ಫಿಲಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ವನಜಾ ಪಾಟೀಲ್ ನಿರ್ಮಿಸಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ.  ಚಿತ್ರಕ್ಕೆ ವಿ. ಹರಿಕೃಷ್ಣ  ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ.

ಗರಡಿ  ಟ್ರೈಲರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಯಶಸ್ಸು ಸೂರ್ಯ, ಬಿ.ಸಿ ಪಾಟೀಲ್ ಕಾಂಬಿನೇಷನ್ ಬೊಂಬಾಟ್‌ ಆಗಿ‌ದೆ.  ಕಮರ್ಷಿಯಲ್ ಚಿತ್ರಕ್ಕೆ ಬೇಕಾಗುವ ಲವ್, ಕಾಮಿಡಿ, ಸೆಂಟಿಮೆಂಟ್ ಟ್ರೈಲರ್​​ ತೋರಿಸುತ್ತಿದೆ.  ಕುಸ್ತಿಗೆ ಹಳ್ಳಿಗಳಲ್ಲಿ ಎಷ್ಟು ಮಹತ್ವ ಇದೆ ಎನ್ನುವುದು ಟ್ರೈಲರ್ ನಲ್ಲಿದೆ.

ಗರಡಿ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ ಇಲ್ಲದೆ ಯು/ಎ ಸರ್ಟಿಫಿಕೆಟ್ ನೀಡಿದೆ‌. ನವೆಂಬರ್ 10ರಂದು ಗರಡಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!