”ಗರಡಿ ಚಿತ್ರ ರಾಜ್ಯದ 250 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ” ಎಂದು ಚಿತ್ರದ ನಿರ್ಮಾಪಕ ಬಿ. ಸಿ. ಪಾಟೀಲ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿ. ಸಿ. ಪಾಟೀಲ್ ಅವರು, ”ಸಿನಿಮಾ ಬಿಡುಗಡೆಯಾದ ಒಂದು ವಾರದ ಬಳಿಕ ಹಿಂದಿ ಭಾಷೆಗೆ ಡಬ್ ಆಗಲಿದೆ. 12 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಮೂರು ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೈಲ್ವಾನರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಮೂಲಕ ಗರಡಿ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂಬ ಭಾವನೆ ನಮ್ಮದು” ಎಂದರು.
”ಸಿನಿಮಾ ವಿಭಿನ್ನ ಕಥಾಹಂದರ ಹೊಂದಿದ್ದು, ಬಾದಾಮಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಆರು ಹಾಡುಗಳಿದ್ದು, ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್, ಸಂತೋಷ್, ಹರಿಕೃಷ್ಣ ಹಾಡುಗಳನ್ನು ಹಾಡಿದ್ದಾರೆ. ಯಶಸ್ ಸೂರ್ಯ ನಾಯಕ ನಟನಾದರೆ ತಾನೂ ಅಭಿನಯಿಸುತ್ತೇನೆ ಎಂದು ದರ್ಶನ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಥೆಗೂ ಹೊಂದಿದ ಕಾರಣ ಯಶಸ್ ಸೂರ್ಯ ನಾಯಕ ನಟರಾದರು. ಇದಕ್ಕೆ ದರ್ಶನ್ ಅವರೇ ಕಾರಣ” ಎಂದು ತಿಳಿಸಿದರು.
ನಿರ್ದೇಶಕ ಯೋಗರಾಜ್ ಭಟ್, ”’ಗರಡಿ’ ಚಿತ್ರ ಕೈಗೆತ್ತಿಕೊಂಡು ಒಂದೂವರೆ ವರ್ಷ ಮೇಲಾಯ್ತು. ದರ್ಶನ್ ನಟನೆ ಮಾಡಲು ಒಪ್ಪಿದರು. ಮುಂಚಿನ ರೀತಿ ಸಿನಿಮಾ ಇಲ್ಲ. ದೊಡ್ಡ ಸಿನಿಮಾ ಆಯ್ತು. ಎಲ್ರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ದಾವಣಗೆರೆ ನೆಲದ ವಾಸನೆಯೂ ಇದೆ. ಸೊಲ್ಲಾಪುರ, ರಾಣೆಬೆನ್ನೂರು ಪೈಲ್ವಾನರು ಸೇರಿದಂತೆ ಒರಿಜಿನಲ್ ಪೈಲ್ವಾನರು ನಟಿಸಿದ್ದಾರೆ. ಉತ್ತರ ಕರ್ನಾಟಕ ಸೇರಿದಂತೆ ಎಲ್ಲರಿಗೂ ಇಷ್ಟವಾಗುವಂಥ ಚಿತ್ರ ಮಾಡಿದ್ದೇವೆ” ಎಂದರು.
”ಏಕಲವ್ಯ ದ್ರೋಣಚಾರ್ಯ ಕಥೆ ಈ ಚಿತ್ರದ್ದು. ಕುಸ್ತಿ ಕಲಿಯಬಾರದು ಎಂದು ಚಿತ್ರದಲ್ಲಿ ಬಿ. ಸಿ. ಪಾಟೀಲ್ ಯಾಕೆ ನಾಯಕನ ಬಳಿ ಮಾತು ತೆಗೆದುಕೊಂಡಿರುತ್ತಾರೆ? ಅನ್ನೋದೇ ಚಿತ್ರದ ಒನ್‌ಲೈನ್ ಸ್ಟೋರಿ” ಎಂದರು ನಿರ್ದೇಶಕರು.
‘ಗರಡಿ’ ಚಿತ್ರ ನವೆಂಬರ್ 10ರಂದು ತೆರೆ ಕಾಣಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
—–
Be the first to comment