ನಿರ್ದೇಶನ: ಪ್ರೀತಮ್ ಗುಬ್ಬಿ
ನಿರ್ಮಾಣ: ಶ್ರೀ ವಾರಿ ಟಾಕೀಸ್
ತಾರಾ ಬಳಗ: ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ, ರಂಗಾಯಣ ರಘು ಇತರರು
ರೇಟಿಂಗ್: 3.5/5
‘Baanadariyalli’ movie review :
ಮೇಲ್ನೋಟಕ್ಕೆ ಪ್ರೇಮಕಥೆ ಎಂದು ಬಾನ ದಾರಿಯಲ್ಲಿ ಚಿತ್ರವನ್ನು ಅಂದುಕೊಂಡರೆ ಅದು ತಪ್ಪಾಗುತ್ತದೆ. ಈ ಚಿತ್ರವನ್ನು ಪ್ರೀತಿಯ ಕುರಿತಾದ ಕಥೆ ಇದು ಎನ್ನುವುದು ಹೆಚ್ಚು ಸೂಕ್ತಕರ ಆಗಿದೆ.
ಇಲ್ಲಿ ಒಬ್ಬ ಹುಡುಗ ಹುಡುಗಿಯ ಪ್ರೇಮ ಕಥೆ ಮಾತ್ರ ಇಲ್ಲ. ಅಪ್ಪ -ಮಗಳ ನಡುವಿನ ಪ್ರೀತಿ ಇದೆ. ಮನುಷ್ಯರ ನಡುವಣ, ಪರಿಸರದ ಬಗೆಗಿನ ಪ್ರೀತಿ ಇಲ್ಲಿದೆ. ಹುಡುಗ ಹುಡುಗಿ ನಡುವಣ ಪ್ರೀತಿಯ ಕಥೆಗಳ ನಡುವೆ ಈ ಚಿತ್ರ ಭಿನ್ನವಾಗಿ ಕಾಣುತ್ತದೆ.
ಚಿತ್ರದ ಮೂಲಕ ನಿರ್ದೇಶಕರು ಪ್ರೀತಿ ಎನ್ನುವುದು ಹುಡುಗ ಹುಡುಗಿಗೆ ಮಾತ್ರ ಸೀಮಿತವಲ್ಲ, ಅದನ್ನು ಮೀರಿದ್ದು ಇದೆ ಎಂದು ಹೇಳಿದ್ದಾರೆ. ಈ ಕಾರಣದಿಂದ ಸಿನಿಮಾ ಭಾವನಾತ್ಮಕ ಚಿತ್ರವಾಗಿ ಮೂಡಿ ಬಂದಿದೆ. ಮೊದಲಾರ್ಧ ಚಿತ್ರ ಪ್ರೇಮ ಕಥೆಯಾಗಿ ಕಂಡರೂ, ಬಳಿಕ ಬೇರೆಯದ್ದೇ ರೂಪ ಪಡೆಯುತ್ತದೆ.
ನಾಯಕ ನಟ ಗಣೇಶ್ ಅವರು ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಒಬ್ಬ ನಾಯಕಿ ಆಟಗಾರ್ತಿಯಾಗಿ, ಇನ್ನೊಬ್ಬ ನಾಯಕಿ ಟ್ರಾವೆಲ್ ಬ್ಲಾಗರ್ ಆಗಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಇಂದಿನ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಇಷ್ಟವಾಗುವ ಹೊಸ ಅಂಶಗಳನ್ನು ಚಿತ್ರದಲ್ಲಿ ಹೇಳುವ ಯತ್ನ ಮಾಡಿದ್ದಾರೆ.
ಚಿತ್ರಕಥೆ ಹಾಗೂ ನಿರೂಪಣೆಯಲ್ಲಿ ನಿರ್ದೇಶಕರು ಚುರುಕುತನ ತೋರಿಸುವ ಅಗತ್ಯ ಇತ್ತು. ಅವರು ತಮ್ಮ ಹಳೆಯ ಚಿತ್ರಗಳ ಗುಂಗಿನಿಂದ ಹೊರಗೆ ಬಂದಂತೆ ಕಾಣುತ್ತಿಲ್ಲ. ಚಿತ್ರದ ಕೊನೆಯ 30 ನಿಮಿಷಗಳಲ್ಲಿ ಭಾವನಾತ್ಮಕವಾದ ಅಂಶಗಳು ಪ್ರೇಕ್ಷಕರಿಗೆ ತಟ್ಟುವ ಕಾರಣ ಚಿತ್ರ ನೀರಸ ಆಗುವುದು ಸ್ವಲ್ಪ ತಪ್ಪಿದೆ. ಆದರೂ ಒಟ್ಟಾರೆ ಚಿತ್ರ ನಿಧಾನವಾಗಿ, ಕೆಲವೊಮ್ಮೆ ನೀರಸವಾಗಿ ಸಾಗುತ್ತದೆ.
ಗಣೇಶ್, ರುಕ್ಮಿಣಿ ವಸಂತ ಹಾಗೂ ರಂಗಾಯಣ ರಘು ತಮ್ಮ ನಟನೆಯ ಮೂಲಕ ಚಿತ್ರವನ್ನು ಮೇಲಕ್ಕೆ ಕೊಂಡು ಹೋಗಿದ್ದಾರೆ. ಗಣೇಶ್ ಹಾಗೂ ರುಕ್ಮಿಣಿ ಚಿತ್ರದಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಅಭಿಲಾಶ್ ಕಲ್ಲತ್ತಿ ಅವರ ಛಾಯಾಗ್ರಹಣ ಸಾಕಷ್ಟು ಸುಂದರವಾಗಿ ಮೂಡಿಬಂದಿದೆ. ಅವರು ಬೆಂಗಳೂರು ಸೇರಿದಂತೆ ದಕ್ಷಿಣ ಆಫ್ರಿಕಾದ ಲೊಕೇಶನ್ ಸುಂದರವಾಗಿ ಸೆರೆ ಹಿಡಿದಿದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತ ಮನಸ್ಸಿಗೆ ನಾಟುವಲ್ಲಿ ಸ್ವಲ್ಪ ಹಿಂದಕ್ಕೆ ಬಿದ್ದಿದೆ. ಒಂದು ಇಂಪಾದ ಹಾಡು ಮಾತ್ರ ಮನಸ್ಸಿನಲ್ಲಿ ಸ್ವಲ್ಪ ಉಳಿದುಕೊಳ್ಳುತ್ತದೆ.
____
Be the first to comment