ಗೋಲ್ಡನ್ ಸ್ಟಾರ್ ಗಣೇಶ್ ಅವರು ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾದ ಡಬ್ಬಿಂಗ್ ಮುಗಿಸಿದ್ದಾರೆ.
ಈ ಬಗ್ಗೆ ಯೋಗರಾಜ್ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಡಬ್ಬಿಂಗ್ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಗಾಳಿಪಟ 2 ಸಿನಿಮಾ ಆರಂಭ ಆಗಿ ಮೂರು ವರ್ಷ ಆಗುತ್ತಾ ಬಂದಿದೆ. ಆದರೆ ಕೊರೋನಾ ಕಾರಣದಿಂದ ಚಿತ್ರದ ಕೆಲಸ ತಡವಾಗಿದೆ. ಈಗ ನಾಯಕ ಗಣೇಶ್ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಸದ್ಯದಲ್ಲೇ ಚಿತ್ರತಂಡ ರಿಲೀಸ್ ನತ್ತ ಹೆಜ್ಜೆ ಹಾಕಲಿದೆ. ಈ ಸಿನಿಮಾದಲ್ಲಿ ಗಣೇಶ್ ಜೊತೆಗೆ ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
2008ರಲ್ಲಿ ಬಿಡುಗಡೆಯಾಗಿದ್ದ ಗಾಳಿಪಟ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಗಾಳಿಪಟ-2 ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯ ಚಿತ್ರದ ನಿರ್ದೇಶಕ ಪವನ್ ಕುಮಾರ್ ನಟಿಸುತ್ತಿದ್ದಾರೆ. ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ ಮನಸಾರೆ ಮತ್ತು ಪಂಚರಂಗಿ ಸಿನಿಮಾಗಳಲ್ಲಿ ನಟಿಸಿದ್ದರು. ಅನಂತ್ ನಾಗ್ ಈ ಸಿನಿಮಾದಲ್ಲಿ ಮೇಷ್ಟ್ರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಯೋಗರಾಜ ಭಟ್ ಈಗಾಗಲೇ ಹೇಳಿದ್ದಾರೆ.
ಗಾಳಿಪಟ-2 ಚಿತ್ರ ಕಝಕಿಸ್ತಾನದಲ್ಲಿ ಶೂಟಿಂಗ್ ಮಾಡಲ್ಪಟ್ಟ ಮೊದಲ ಕನ್ನಡ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
ಯೋಗರಾಜ ಭಟ್ ಅವರು ಬಿ ಸಿ ಪಾಟೀಲ್ ನಿರ್ಮಾಣದ ಗರಡಿ ಚಿತ್ರವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ರಚಿತರಾಮ್ ಅವರು ಆಯ್ಕೆಯಾಗಿದ್ದಾರೆ. ಯಶಸ್ ಸೂರ್ಯ ನಾಯಕ ನಟ ಆಗಿ ಅಭಿನಯ ಮಾಡಲಿದ್ದಾರೆ.
___

Be the first to comment