ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2 ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿ ಮಾಡಿವೆ.
ಇದನ್ನು ಗಾಳಿಪಟ-2 ನಿರ್ಮಾಪಕ ರಮೇಶ್ ರೆಡ್ಡಿ ಖಚಿತ ಪಡಿಸಿದ್ದಾರೆ. ಆನಂದ್ ಆಡಿಯೋಗೆ ಸಂಗೀತದ ಹಕ್ಕುಗಳು ಮಾರಾಟ ಆಗಿವೆ. ಒಟ್ಟಾರೆ ಚಿತ್ರ 8 ಕೋಟಿ ರೂಪಾಯಿಗೂ ಹೆಚ್ಚು ಪ್ರೀ ರಿಲೀಸ್ ವಹಿವಾಟು ಮಾಡಿದೆ ಎಂದು ಹೇಳಲಾಗಿದೆ.
ಈ ಚಿತ್ರದಲ್ಲಿ ಗಣೇಶ್ , ದಿಗಂತ್ ಜೊತೆಗೆ ಹಿರಿಯ ನಟ ಅನಂತ್ ನಾಗ್, ನಿರ್ದೇಶಕ ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣವಾಗಿರುವ ಗಾಳಿಪಟ 2 ಚಿತ್ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ ಶೀಘ್ರದಲ್ಲೇ ರಿಲೀಸ್ ದಿನಾಂಕ ಹೊರ ಬೀಳಲಿದೆ.
ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದಲ್ಲಿ 2008ರಲ್ಲಿ ಬಿಡುಗಡೆಯಾಗಿದ್ದ ಗಾಳಿಪಟ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಗಾಳಿಪಟ-2 ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯ ಚಿತ್ರದ ನಿರ್ದೇಶಕ ಪವನ್ ಕುಮಾರ್ ನಟಿಸುತ್ತಿದ್ದಾರೆ. ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ ಮನಸಾರೆ ಮತ್ತು ಪಂಚರಂಗಿ ಸಿನಿಮಾಗಳಲ್ಲಿ ನಟಿಸಿದ್ದರು. ಅನಂತ್ ನಾಗ್ ಈ ಸಿನಿಮಾದಲ್ಲಿ ಕನ್ನಡ ಮೇಷ್ಟ್ರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಯೋಗರಾಜ ಭಟ್ ಈ ಹಿಂದೆಯೇ ಘೋಷಣೆ ಮಾಡಿದ್ದರು.
ಗಾಳಿಪಟ-2 ಚಿತ್ರ ಕಝಕಿಸ್ತಾನದಲ್ಲಿ ಶೂಟಿಂಗ್ ಮಾಡಲ್ಪಟ್ಟ ಮೊದಲ ಕನ್ನಡ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
ಯೋಗರಾಜ ಭಟ್ ಅವರು ಬಿ ಸಿ ಪಾಟೀಲ್ ನಿರ್ಮಾಣದ ಗರಡಿ ಚಿತ್ರವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ರಚಿತಾರಾಮ್ ಅವರು ಆಯ್ಕೆಯಾಗಿದ್ದಾರೆ. ಯಶಸ್ ಸೂರ್ಯ ನಾಯಕ ನಟ ಆಗಿ ಅಭಿನಯಿಸುತ್ತಿರುವ ಈ ಚಿತ್ರದ ಟೈಟಲ್ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ.
___






Be the first to comment