ಗಜಾನನ ಆಂಡ್ ಗ್ಯಾಂಗ್’ ಜೂ.3ಕ್ಕೆ ತೆರೆಗೆ

ಅಭಿಷೇಕ್ ಶೆಟ್ಟಿ ನಿರ್ದೇಶನದ ‘ಗಜಾನನ ಆಂಡ್ ಗ್ಯಾಂಗ್’ ಚಿತ್ರ ಜೂನ್ 3ಕ್ಕೆ ರಿಲೀಸ್ ಆಗಲಿದೆ.

ಈ ಹಿಂದೆ ಫೆಬ್ರವರಿ 4ರಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿತ್ತು. ಆದರೆ ರಿಲೀಸ್​ ದಿನಾಂಕವನ್ನು ಮುಂದೂಡಲಾಗಿದ್ದು, ಈಗ ಕೊನೆಗೂ ಚಿತ್ರ ಪ್ರೇಕ್ಷಕರ ಮುಂದೆ ಬರುತ್ತಿದೆ.
ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಟ್ರೈಲರ್ ನಲ್ಲಿ ಕಾಲೇಜು ಬದುಕಿನ ಜೀವನ ಕಂಡು ಬಂದಿದ್ದು, ಪ್ರೀತಿ, ಹೊಡೆದಾಟ, ಸ್ನೇಹ ಹೈಲೈಟ್ ಆಗಿ ಕಂಡು ಬಂದಿದೆ.

ಚಿತ್ರದಲ್ಲಿ ‘ಇರುವುದೆಲ್ಲ ಬಿಟ್ಟು’ ಸಿನಿಮಾ ಮೂಲಕ ನಾಯಕನಾಗಿ ಗುರುತಿಸಿಕೊಂಡ ಶ್ರೀ ಮಹದೇವ್ ನಾಯಕನಾಗಿ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ.
ಹಾಸ್ಯ ಪ್ರಧಾನವಾದ ಈ ಚಿತ್ರ ಯುವಪೀಳಿಗೆ ಸುತ್ತ ಗಿರಕಿ ಹೊಡೆಯುತ್ತದೆ. ನಿರ್ದೇಶಕ ಅಭಿಷೇಕ್ ಚಿತ್ರದ ಪ್ರಮುಖ ಘಟ್ಟದಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀ ಮಹದೇವ್ ಅವರು ಈ ಚಿತ್ರದಲ್ಲಿ ರಗಡ್, ಟಫ್ ಆಗಿರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಈ ಚಿತ್ರದಲ್ಲಿ ಮಿಡಲ್ ಕ್ಲಾಸ್ ಕಾಲೇಜು ಹುಡುಗಿಯಾಗಿ ನಟಿಸಿದ್ದಾರೆ.

“ಟೈಟಲ್ ನೋಡಿದಾಕ್ಷಣ ಕಾಮಿಡಿ ಶೈಲಿಯ ಸಿನಿಮಾ ಅನಿಸಿದರೂ, ಯಾವುದೇ ಶೈಲಿಗೆ ಸೀಮಿತವಾಗದ ಸಿನಿಮಾ ಇದಾಗಿದೆ. ಎಲ್ಲ ಅಂಶಗಳನ್ನೂ ಸೇರಿಸಿ, ಎಲ್ಲ ವರ್ಗದವರಿಗೂ ಕನೆಕ್ಟ್ ಆಗುವ ಕಥೆ ಈ ಚಿತ್ರದಲ್ಲಿದೆ” ಎಂದು ನಿರ್ದೇಶಕ ಅಭಿಷೇಕ್ ಶೆಟ್ಟಿ ಹೇಳಿದ್ದಾರೆ.

“ಸಿನಿಮಾದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇರುತ್ತದೆ. ಚಾಕಲೇಟ್ ಹೀರೋ, ಲವ್ವರ್ ಬಾಯ್ ಇಮೇಜ್‌ಗಿಂತ ವಿಭಿನ್ನವಾದ ಪಾತ್ರ ಇಲ್ಲಿದೆ. ಎರಡು ಕಾಲಘಟ್ಟದಲ್ಲಿ ಕಥೆ ನಡೆಯುತ್ತದೆ. ನಾನು ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಗಜ ಎಂಬುದು ನನ್ನ ಪಾತ್ರದ ಹೆಸರು” ಎಂದು ಶ್ರೀ ಮಹದೇವ್ ಹೇಳಿದ್ದಾರೆ.

” ಚಿತ್ರ ಕಲರ್​ಫುಲ್​ ಕಾಲೇಜ್ ಕಥೆ ಒಳಗೊಂಡಿದೆ. ಇದು ಮಧ್ಯಮ ವರ್ಗದ ಕಾಲೇಜು ಪ್ರೀತಿಯಿಂದ ಶುರುವಾಗಿ ಫ್ಲ್ಯಾಶ್ ಬ್ಯಾಕ್ ಇರುವ ನಿರೂಪಣೆ ಹೊಂದಿದೆ” ಎಂದು ಅದಿತಿ ಪ್ರಭುದೇವ ತಿಳಿಸಿದ್ದಾರೆ.

ಚಿತ್ರದ ಮೂರು ಹಾಡುಗಳಿಗೆ ಪ್ರದ್ಯುತನ್ ಅವರು ಸಂಗೀತ ಸಂಯೋಜಿಸಿದ್ದಾರೆ. ಉದಯ ಲೀಲ ಕ್ಯಾಮರಾ, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ.

ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯುಎಸ್ ನಾಗೇಶ್ ಕುಮಾರ ಚಿತ್ರಕ್ಕೆ ಹಣ ಹೂಡಿದ್ದಾರೆ.

ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ದನಿಯಾಗಿದ್ದಾರೆ. ಈ ಹಾಡಿಗೆ ನಿರ್ದೇಶಕ ಅಭಿಷೇಕ್ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!