ಗಡಿನಾಡು ಗೊಂದಲ..! ನಾಳೆ ರಾಜ್ಯಾದ್ಯಂತ ತೆರೆಗೆ

ರಾಜ್ಯದ ಗಡಿನಾಡಿನ ವಿಚಾರ ಬಂದಾಗ ಹೋರಾಟ, ಪ್ರತಿಭಟನೆಗಳು ಸಾಮಾನ್ಯ ಪದಗಳಾಗಿರಬಹುದು. ಆದರೆ `ಗಡಿನಾಡು’ ಎನ್ನುವ ಹೆಸರಿನ ಚಿತ್ರ ಬಂದಾಗಲೂ, ಸಿನಿಮಾದ ಬಿಡುಗಡೆಗೆ ಹೆಸರಿನ ಕಾರಣಕ್ಕೆ ತಡೆಯಾಜ್ಞೆ ತರುವ ಪ್ರಯತ್ನ ನಡೆದಿದೆ. ಹಾಗಂತ ನೇರವಾಗಿ ಆರೋಪಿಸಿದವರು ಗಡಿನಾಡು ಚಿತ್ರದ ನಿರ್ದೇಶಕ ನಾಗ್ ಹುಣಸೋಡು.

ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದ ವಿಚಾರವನ್ನು ಕತೆಯಾಗಿರಿಸಿ ತೆರೆಗೆ ಬರುತ್ತಿರುವ ಈ ಸಿನಿಮಾವು ಬಿಡುಗಡೆಯಾದರೆ ಸಮಾಜದ ಸ್ವಾಸ್ಥ್ಯ ಕೆಡಬಹುದು ಎನ್ನುವುದು ಚಿತ್ರವನ್ನು ತಡೆಯುತ್ತಿರುವವರ ಆರೋಪವಂತೆ. ಅದಕ್ಕೆ ಪೂರಕವಾಗಿ ತಮಗೆ ಬೆದರಿಕೆ ಕರೆ ಮಾಡಿದರೆನ್ನಲಾದ ಪ್ರೊಫೆಸರ್ ಬಿ.ಕೆ ರಾವ್ ಬೈಂದೂರು ಎನ್ನುವವರು ಮಾತನಾಡಿದ ಆಡಿಯೋ ರೆಕಾರ್ಡಿಂಗ್ ಅನ್ನು ಅವರು ಮಾಧ್ಯಮಗಳಿಗೆ ಕೇಳಿಸಿಕೊಟ್ಟರು. ಅದರಲ್ಲಿ ಕೇಳಿದ ಪ್ರಕಾರ, ಗಡಿವ್ಯಾಪ್ತಿಯ ಸಮಿತಿಗೆ ತಾವು ಅಧ್ಯಕ್ಷರಾಗಿದ್ದು, ಗಡಿ ಪದವನ್ನು ಬಳಸಿ ಯಾವುದೇ ಚಿತ್ರ ತೆರೆಕಂಡಾಗ ಅದು ಒಂದು ಗಡಿ ಭಾಗದ ಜನರಲ್ಲಿ ಖಂಡಿತವಾಗಿ ಅಸಮಾಧಾನ ಸೃಷ್ಟಿಸುತ್ತದೆ. ಹಾಗೆ ಅಶಾಂತಿಗೆ ಕಾರಣವಾಗುವ ಚಿತ್ರವನ್ನು ತಡೆಯುವುದು ತಮ್ಮ ಕರ್ತವ್ಯ ಎಂದು ಅವರು ಹೇಳಿಕೊಂಡಿದ್ದಾರೆ. ಚಿತ್ರೀಕರಣ ಶುರುವಾದ ದಿನಗಳಿಂದಲೇ ಟೈಟಲ್ ಬದಲಾಯಿಸುವಂತೆ ಬಂದಿದ್ದ ಕರೆಗಳು ಇದೀಗ ಚಿತ್ರ ಬಿಡುಗಡೆಯಾಗದಂತೆ ತಡೆಯಾಜ್ಞೆ ತರುವಮಟ್ಟಕ್ಕೆ ಬಂದಿದೆ. ಈ ಬಗ್ಗೆ ನಿರ್ದೇಶಕರು ಉಪ್ಪಾರ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಅವರು ಕರೆ ಬಂದಿದ್ದ ನಿರ್ದೇಶಕರ ಮನೆಯ ವ್ಯಾಪ್ತಿಯಲ್ಲಿ ಅಂದರೆ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಹೇಳಿದ್ದಾರಂತೆ. ದೂರು ನೀಡಲಿರುವುದಾಗಿ ನಿರ್ದೇಶಕರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕ ವಸಂತ್ ಮುರಾರಿ ದಳವಾಯಿ ಇದು ಒಂದು ನೈಜ ಘಟನೆಯನ್ನು ಆಧಾರಿಸಿ ತಯಾರಾದ ಚಿತ್ರ. ಇದರಲ್ಲಿ ಗಡಿಭಾಗದ ಸಮಸ್ಯೆಯನ್ನು ಹೇಳಲಾಗಿದೆ ಎಂದರು. ಚಿತ್ರದ ನಾಯಕರಾಗಿ ಪ್ರಭು ಸೂರ್ಯ ನಟಿಸಿದ್ದು, ನಾಯಕಿಯಾಗಿ ಸಂಚಿತಾ ಪಡುಕೋಣೆ ಅಭಿನಯಿಸಿದ್ದಾರೆ ಎಂದರು. ಸಂಚಿತಾ, ತಮ್ಮದು ಚಿತ್ರದಲ್ಲಿ ಮರಾಠಿ ಹುಡುಗಿಯ ಪಾತ್ರ ಎಂದರು. ಇದೇ ಶುಕ್ರವಾರ ರಾಜ್ಯಾದ್ಯಂತ ನೂರು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳಿಸುವ ಯೋಜನೆ ಚಿತ್ರ ತಂಡದ್ದಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!