ಬಿಗ್ಬಾಸ್ ಸೀಸನ್ 11ರ ಸ್ಪರ್ಧಿ ಗೋಲ್ಡ್ ಸುರೇಶ್ ವಿರುದ್ಧ ಹಣ ವಂಚನೆ ಆರೋಪ ಕೇಳಿ ಬಂದಿದೆ.
ಗೋಲ್ಡ್ ಸುರೇಶ್ ಕೇಬಲ್ ಚಾನೆಲ್ ಸೆಟ್ಅಪ್ ಮಾಡಿಕೊಡುವುದಾಗಿ ಹೇಳಿ ವಂಚನೆ ಮಾಡಿದ್ದಾರೆಂದು ರಾಯಚೂರು ಜಿಲ್ಲೆ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬವರು ಆರೋಪ ಮಾಡಿದ್ದಾರೆ. ಸುರೇಶ್ ಕೆಲಸ ಅರ್ಧಕ್ಕೆ ಬಿಟ್ಟರು ಹಾಗೂ ಹಣವನ್ನು ಮರಳಿ ನೀಡಿಲ್ಲ ಎಂದು ಮೈನುದ್ದೀನ್ ಆರೋಪಿಸಿದ್ದಾರೆ.
ಕೇಬಲ್ ಚಾನೆಲ್ನ ಸೆಟಪ್ ಮಾಡುವುದಾಗಿ ಮೈನುದ್ದಿನ್ ಎಂಬವರಿಗೆ ಗೋಲ್ಡ್ ಸುರೇಶ್ ಹೇಳಿದ್ದರು. ಅದಕ್ಕಾಗಿ 14 ಲಕ್ಷ ರೂಪಾಯಿಗೆ ಒಪ್ಪಂದ ಆಗಿತ್ತು. ಸುರೇಶ್ ಅವರು 4 ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದರು. ಆ ಬಳಿಕ ಹಂತ ಹಂತವಾಗಿ ಮೈನುದ್ದೀನ್ ಅವರು ಸುರೇಶ್ಗೆ 7 ಲಕ್ಷ ರೂ. ನೀಡಿದ್ದರು. 2017ರಲ್ಲಿ ಈ ಒಪ್ಪಂದ ನಡೆದಿತ್ತು.
‘ದುಡ್ಡು ಕೊಟ್ಟರೆ ಮಾತ್ರ ಕೆಲಸ ಮುಂದುವರಿಸುತ್ತೇನೆ ಅಂತ ಅವರಿಗೆ ಹೇಳಿದ್ದೆ. ಈ ರೀತಿ ತುಂಬ ಪೆಟ್ಟುಗಳನ್ನು ನಾನು ತಿಂದಿದ್ದೆ. ಅವರ ವರ್ತನೆ ನನಗೆ ಇಷ್ಟ ಆಗಲಿಲ್ಲ. ಹಾಗಾಗಿ ಕೆಲಸ ಮಾಡಲ್ಲ ಅಂತ ಹೇಳಿ ಬೆಂಗಳೂರಿಗೆ ವಾಪಸ್ ಬಂದೆ. ಅವರು ನಮಗೆ 7 ಲಕ್ಷ ರೂಪಾಯಿ ನೀಡಿದ್ದರು. ಕೆಲಸ ಮಾಡಲ್ಲ ಎಂದರೆ ದುಡ್ಡು ವಾಪಸ್ ಕೊಡಿ ಅಂದರು. ಅಲ್ಲಿಯವರೆಗೆ ಕೆಲಸಕ್ಕೆ ತಗುಲಿದ ಹಣವನ್ನು ಬಿಟ್ಟು ಉಳಿದ ಹಣವನ್ನು ನಾನು ಅವರಿಗೆ ವಾಪಸ್ ನೀಡಿದ್ದೇನೆ’ ಎಂದು ಗೋಲ್ಡ್ ಸುರೇಶ್ ಸ್ಪಷ್ಟಪಡಿಸಿದ್ದಾರೆ.
‘2018ರಿಂದ ನನ್ನ ಪಾಡಿಗೆ ಬಿಸ್ನೆಸ್ ಮಾಡಿಕೊಂಡಿದ್ದೆ. ಆಗ ಈ ವ್ಯಕ್ತಿ ಸಡನ್ ಆಗಿ ಬಂದು ದುಡ್ಡು ಕೊಡಬೇಕು ಎಂದರು. ಇದು ಬಿಸ್ನೆಸ್ ವಿಷಯ. ಸಿವಿಲ್ ಕೋರ್ಟ್ನಲ್ಲಿ ಕೇಸ್ ಮಾಡಬಹುದಿತ್ತು. ಅಗ್ರಿಮೆಂಟ್ ಮುಗಿದು ಹೋಗಿದ್ದರೆ ಅದರ ಮೇಲೆ ಕೇಸ್ ಮಾಡಲು 3 ವರ್ಷ ಸಮಯ ಇರುತ್ತದೆ. ಅದನ್ನು ಕೂಡ ಅವರು ಮಾಡಿಲ್ಲ’ ಎಂದು ಗೋಲ್ಡ್ ಸುರೇಶ್ ಹೇಳಿದ್ದಾರೆ.
‘ಸಡನ್ ಆಗಿ ಬೆಳಗ್ಗೆ ಒಂದು ಕರೆ ಬರುತ್ತದೆ. 6 ಲಕ್ಷ ರೂಪಾಯಿ ಹಣ ನೀಡದಿದ್ದರೆ ಮಾಧ್ಯಮಗಳ ಎದುರು ಹೋಗುತ್ತೇನೆ ಎಂದು ನನಗೆ ಬೆದರಿಕೆ ಹಾಕಿದರು. ನಾನು ಬಿಗ್ ಬಾಸ್ ಮುಗಿಸಿ ಬಂದ ಮೇಲೆ ಈ ವ್ಯಕ್ತಿ ಫೋನ್ ಮಾಡಿ ಸಹಾಯ ಮಾಡಿ ಅಂತ ಕೇಳಿದರು. ಮಾನವೀಯತೆ ದೃಷ್ಟಿಯಿಂದ 50 ಸಾವಿರ ರೂಪಾಯಿ ಕೊಡಿಸಿದ್ದೇನೆ. ಇದನ್ನು ಹೊರತುಪಡಿಸಿ ನಮಗೂ ಅವರಿಗೂ ಯಾವುದೇ ವ್ಯವಹಾರ ಇಲ್ಲ’ ಎಂದು ಗೋಲ್ಡ್ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.
—-





Be the first to comment