ಸುಕನ್ಯ ದ್ವೀಪ ಎನ್ನುವ ಟೈಟಲ್ ಕೇಳಿದೊಡನೆ ಇದೊಂದು ಸಸ್ಪೆನ್ಸ್ ಚಿತ್ರವಿರಬಹುದು ಎಂದುಕೊಳ್ಳುತ್ತಾರೆ. ಆದರೆ ಅಂಥಾ ಯಾವುದೇ ಸಸ್ಪೆನ್ಸ್ , ಥ್ರಿಲ್ಲರ್ ಇರದೆ ಪಕ್ಕಾ ಫ್ಯಾಮಿಲಿ ಲವ್ ಎಂಟರ್‌ಟೈನರ್ ಕಥಾಹಂದರಕ್ಕೆ ಹಾಸ್ಯದ ಟಚ್ ಕೊಟ್ಟು ನಿರೂಪಿಸುವ ಪ್ರಯತ್ನವನ್ನು ನಿರ್ದೇಶಕ ಎಂ.ಡಿ. ಅಫ್ಜಲ್ ಮಾಡಿದ್ದಾರೆ.
ಸೂಪರ್ ಸ್ಟಾರ್ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಇವರು ಈಗಾಗಲೇ ಮೊಬೈಲ್ ರಾಜ ಎನ್ನುವ ಚಿತ್ರ ನಿರ್ದೇಶಿಸಿದ್ದು, ಅದಿನ್ನೂ ಬಿಡುಗಡೆಯಾಗಿಲ್ಲ, ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಎರಡನೇ ಹಂತಕ್ಕೆ ಅಣಿಯಾಗಿದ್ದು, ಅದಕ್ಕೂ ಮುನ್ನ ಮಾಧ್ಯಮಗಳ ಮುಂದೆ ಹಾಜರಾಗಿ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿತು.
ಚಿತ್ರದ ಮೇಕಿಂಗ್ ವೀಡಿಯೋವನ್ನು ಹಾಡೊಂದರ ಮೂಲಕ ತೆರೆಮೇಲೆ ತೋರಿಸಿದ ನಂತರ ಮಾತನಾಡಿದ ನಿರ್ದೇಶಕ ಅಫ್ಜಲ್, ಈವರೆಗೆ ೧೮ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ನಿರ್ವಹಿಸಿದ್ದೇನೆ. ನನ್ನ ನಿರ್ದೇಶನದ ಎರಡನೇ ಚಿತ್ರವಿದು, ರಾಜ್‌ಪ್ರಭು ಅವರಿಂದ ನನಗೀ ಸಿನಿಮಾದ ಅವಕಾಶ ಸಿಕ್ಕಿತು, ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥಾಹಂದರ ಈ ಚಿತ್ರದಲ್ಲಿದ್ದು, ವಿಶೇಷ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ ಸಬ್ಜೆಕ್ಟ್ ನಲ್ಲಿ ಲವ್‌ಸ್ಟೋರಿ ಕೂಡ ಇದೆ. ಕಾಮಿಡಿಗೆ ಹೆಚ್ಚು ಒತ್ತು ನೀಡಿದ್ದೇವೆ. ಈಗಾಗಲೇ ಬೆಂಗಳುರು ಸುತ್ತಮುತ್ತ ಒಂದು ಹಂತದ ಶೂಟಿಂಗ್ ಮುಗಿಸಿದ್ದು, ಮುಂದಿನ ಹಂತದಲ್ಲಿ ಹಾಸನ, ಕಳಸ, ಬೇಲೂರು ಹೀಗೆ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಿಸುವ ಯೋಜನೆ ಹಾಕಿಕೊಂಡಿದ್ದೇವೆ, ಸುಕನ್ಯ ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಿದ್ದೇವೆ. ಆ ಮೂವರು ಹೆಣ್ಣುಮಕ್ಕಳು ಪ್ರೇಮದ ಬಲೆಗೆ ಬಿದ್ದಾಗ ಫ್ಯಾಮಿಲಿಯಿಂದ ಅಡ್ಡಿಯಾಗುತ್ತದೆ, ನಂತರ ಒಂದು ಮೇಜರ್ ಟ್ವಿಸ್ಟ್ ಇರುತ್ತದೆ, ಕೊಲೆ, ಸಸ್ಪೆನ್ಸ್ ಅಂಥದ್ದೇನೂ ಇಲ್ಲದೆ ನೀಟಾಗಿ ಕಥೆ ಹೇಳಿಕೊಂಡು ಹೋಗುತ್ತೇವೆ. ಸ್ನೇಹಿತ ಅಲ್ವಿನ್ ಸೊಗಸಾದ ಡೈಲಾಗ್‌ಗಳನ್ನು ಬರೆದುಕೊಟ್ಟಿದ್ದಾರೆ ಎಂದು ಹೇಳಿದರು.
ನಂತರ ಚಿತ್ರದ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ರಾಜ್ ಪ್ರಭು ಮಾತನಾಡಿ ತಮಿಳಿನ ಹಾಸ್ಯನಟ ದಿ. ವಿವೇಕ್ ಅವರಿಂದ ಇನ್‌ಸ್ಪೈರ್ ಆಗಿ ಈ ಕಥೆಯನ್ನು ಮಾಡಿಕೊಂಡಿದ್ದೇವೆ. ಚಿತ್ರದಲ್ಲಿ ನನ್ನ ಪಾತ್ರ ಸೆಕೆಂಡ್ ಹಾಫ್ ನಲ್ಲಿ ಬರುತ್ತೆ, ಅದರಲ್ಲಿ ಒಂದಷ್ಟು ಕುತೂಹಲವೂ ಇದೆ. ನಿರ್ಮಾಪಕ ವೀರಬಾಹು ಅವರು ನನಗೆ ಸ್ನೇಹಿತರು ಎಂದು ಹೇಳಿದರು. ಈ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿರುವ ಕೌಶಿಕ್ ಹರ್ಷ ಮಾತನಾಡಿ ರಾಜ್‌ಪ್ರಭು ನನಗೆ ಈ ಕಥೆಯನ್ನು ಹೇಳಿದಾಗ ತುಂಬಾ ಇಷ್ಟವಾಯ್ತು, ಚಿತ್ರದಲ್ಲಿ ೫ ಹಾಡುಗಳಿದ್ದು, ಈಗ ಒಂದು ಹಾಡನ್ನು ಕೇಳಿಸಲಾಗಿದೆ ಎಂದರು.
ನಿರ್ಮಾಪಕ ವೀರಬಾಹು ಮಾತನಾಡುತ್ತ ಗೆಳೆಯ ರಾಜಪ್ರಭು ಹೀಗೇ ಮಾತಾಡುತ್ತ ಒಂದೊಳ್ಳೇ ಕಥೆಯಿದೆ. ಸಿನಿಮಾ ಮಾಡೋಣ ಎಂದರು. ಎರಡು ಲೈನ್ ಕಥೆ ಕೇಳಿಯೇ ನಾನು ನಿರ್ಮಾಣಕ್ಕೆ ಒಪ್ಪಿದೆ. ಮಚ್ಚು, ಲಾಂಗು ಇಲ್ಲದ ನೀಟ್ ಫ್ಯಾಮಿಲಿ ಎಂಟರ್‌ಟೈನರ್ ಎಂದು ಹೇಳಿಕೊಂಡರು. ಚಿತ್ರದ ನಾಯಕರಲ್ಲೊಬ್ಬರಾದ ಸಚಿನ್ ಪುರೋಹಿತ್ ಮಾತನಾಡಿ ಸ್ಟೂಡೆಂಟ್, ಚರಂತಿ, ಗಡಿಯಾರ ನಂತರ ಇದು ನನ್ನ ನಾಲ್ಕನೇ ಚಿತ್ರ, ತಮಸ್‌ನಲ್ಲಿ ನಾನು ರಾಜ್‌ಪ್ರಭು ಒಟ್ಟಿಗೇ ಕೆಲಸ ಮಾಡಿದ್ದೆವು. ನನ್ನದು ಲವರ್ ಬಾಯ್ ಥರದ ಪಾತ್ರ ಎಂದರೆ, ಮತ್ತೊಬ್ಬ ನಟ ರವಿ ಮಾತನಾಡಿ ಹೇಳಿದರು. ನಂತರ ಚಿತ್ರದ ಛಾಯಾಗ್ರಾಹಕ ವಿಘ್ನೇಶ್ ನಾಗೇಂದ್ರ ಮಾತನಾಡಿದರು, ಚಿತ್ರದ ನಾಯಕಿಯರಾದ ಶ್ರೇಯಾ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ಮಾತನಾಡಿ ತಂತಮ್ಮ ಪಾತ್ರಗಳ ವಿಶೇಷತೆಯನ್ನು ವಿವರಿಸಿದರು. ಹಿರಿಯನಟ ಎಂಡಿ ಕೌಶಿಕ ಅವರು ಕುಟುಂಬದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Be the first to comment