ಹೊಸಬರ ತಂಡ 2 ಗಂಟೆ 38 ನಿಮಿಷಗಳ ಅವಧಿಯ “ಯಂಗ್ ಮ್ಯಾನ್” ಎಂಬ ಚಿತ್ರ ನಿರ್ಮಾಣ ಮಾಡಿದೆ. ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣವಾಗಿರುವುದು ಈ ಚಿತ್ರದ ವಿಶೇಷ ಆಗಿದೆ.
ಈ ಕುರಿತು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ನಾನು ಈ ಹಿಂದೆ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಸಿನಿಮಾ. ಚೊಚ್ಚಲ ನಿರ್ದೇಶನದಲ್ಲೇ ಏನಾದರೂ ವಿಶೇಷತೆ ಇರಬೇಕೆಂಬ ಹಂಬಲದಿಂದ ಈ ಚಿತ್ರವನ್ನು ಸಿಂಗಲ್ ಟೇಕ್ ನಲ್ಲಿ ಮಾಡಿ ಮುಗಿಸಿದ್ದೇನೆ ಎಂದು ನಿರ್ದೇಶಕ ಮುತ್ತುರಾಜ್ ಹೇಳಿದರು.
ಈ ಹಿಂದೆ ಶಂಕರ್ ನಾಗ್, ಎಸ್ ನಾರಾಯಣ್ ಮುಂತಾದವರು ಈ ಪ್ರಯತ್ನ ಮಾಡಿದ್ದಾರೆ. ಆ ಸಿನಿಮಾಗಳ ಸ್ಪೂರ್ತಿಯಿಂದ ನಾನು ಈ ಪ್ರಯತ್ನವನ್ನು ಮಾಡಿದ್ದೇನೆ. ಸುಮಾರು ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೆ ನಟಿಸಿರುವ ಕಾರಣ ಅವರಿಗೆಲ್ಲಾ ತರಬೇತಿ ನೀಡಿ ಆನಂತರ ಚಿತ್ರೀಕರಣ ಮಾಡಿದ್ದೇನೆ.
ನಮ್ಮ ಚಿತ್ರದಲ್ಲಿ ದೇಶಪ್ರೇಮವನ್ನು ಆಧರಿಸಿದ ಕಥೆಯಿದೆ. ಯಾರು ಊಹಿಸಲಾಗದ್ದ ಕ್ಲೈಮ್ಯಾಕ್ಸ್ ದೆ. ನನ್ನ ಈ ಕನಸ್ಸನ್ನು ನನಸು ಮಾಡಿದ ನನ್ನ ತಾಯಿ ತಂದೆ ವಿಜಯಲಕ್ಷ್ಮಿ – ರಾಮೇಗೌಡ, ಹರೀಶ್ ಹೆಚ್ ಎಸ್ ಹಾಗೂ ಕ್ರಿಯೇಟಿವ್ ಹೆಡ್ ಮುರಳಿ ಎಸ್ ವೈ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಸಿಂಗಲ್ ಟೇಕ್ ನಲ್ಲಿ ಚಿತ್ರ ಮಾಡುವುದು ಸುಲಭದ ಮಾತಲ್ಲ. ನಾವು ಅಂದುಕೊಂಡ ಹಾಗೆ ಚಿತ್ರೀಕರಣ ಮಾಡಲು ಸಹಕಾರ ನೀಡಿದ ಕಲಾವಿದರಿಗೆ ಧನ್ಯವಾದ ಹೇಳಬೇಕು. ಅವರ ಸಹಕಾರವಿಲ್ಲದಿದ್ದರೆ ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣ ಮಾಡಲಾಗುತ್ತಿರಲಿಲ್ಲ. ಕನಕಪುರದ ಬಳಿಯ ಮನೆಯೊಂದರಲ್ಲಿ ವಿಶೇಷ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಣ ಮಾಡಿರುವುದಾಗಿ ಛಾಯಾಗ್ರಾಹಕ ವೀನಸ್ ನಾಗರಾಜ್ ಮೂರ್ತಿ ಹೇಳಿದರು.
ಚಿತ್ರವನ್ನು ಲಿಮ್ಕಾ ದಾಖಲೆಗೆ ಹಾಗೂ ಕೆಲವು ಚಿತ್ರೋತ್ಸವಗಳಿಗೆ ಕಳುಹಿಸುತ್ತಿರುವುದಾಗಿ ಕ್ರಿಯೇಟಿವ್ ಹೆಡ್ ಮುರಳಿ ತಿಳಿಸಿದರು.
Be the first to comment