ವರ್ಷದ ಮೊದಲ ಕನ್ನಡದ ರಿಲೀಸ್ ಚಿತ್ರ ‘ಡಿಎನ್‌ಎ’

2022ರ ಮೊದಲ ಕನ್ನಡ ಚಿತ್ರವಾಗಿ ‘ಡಿಎನ್‌ಎ’ ಚಿತ್ರಮಂದಿರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ.

ಪ್ರಕಾಶ್‌ ರಾಜ್‌ ಮೆಹು ನಿರ್ದೇಶಿಸಿರುವ ಈ ಚಿತ್ರ ಜನವರಿ 7ರಂದು ಬಿಡುಗಡೆಯಾಗಲಿದೆ. ಮಾತೃಶ್ರೀ ಎಂಟರ್‌ಪ್ರೈಸಸ್‌ ಬ್ಯಾನರ್‌ನಲ್ಲಿ ಮೈಲಾರಿ ಎಂ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

” ನಾನು ಕಳೆದ 25 ವರ್ಷ ಗಳಿಂದ ಚಿತ್ರರಂಗದಲ್ಲಿ ಇದ್ದೇನೆ. ಇದು ನನ್ನ ಮೊದಲ ಸಿನಿಮಾ. ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಕಲಾತ್ಮಕವೂ ಆಗದೇ, ಪೂರ್ಣ ಕಮರ್ಷಿಯಲ್‌ ಚಿತ್ರವೂ ಆಗದೇ ಅದರ ನಡುವಣ ಸಿನಿಮಾವನ್ನಾಗಿ ಡಿಎನ್‌ಎ ಮಾಡಿದ್ದೇನೆ” ಎಂದು ನಿರ್ದೇಶಕ ಪ್ರಕಾಶ್ ರಾಜ್ ಮೆಹು ಹೇಳಿದ್ದಾರೆ.

” ಇಂದಿನ ಕಾಲಘಟ್ಟದಲ್ಲಿ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ. ಜಾತಿ ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಗೋಡೆಗಳು ಭದ್ರಗೊಳ್ಳುತ್ತಿರುವ ಈ ಸಮಯದಲ್ಲಿ ನಿಜವಾದ ಸಂಬಂಧ ಯಾವುದು ಎಂದು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದೇನೆ. ಈಗಾಗಲೇ ಸಿನಿಮಾ ನೋಡಿರುವ ನಟ, ತಾಂತ್ರಿಕ ವರ್ಗದಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾವುದೇ ಮುಜುಗರವಿಲ್ಲದೇ ಇಡೀ ಕುಟುಂಬ ಕುಳಿತು ನೋಡುವ ಸಿನಿಮಾ ಎಂಬ ಹೊಗಳಿಕೆ ಬಂದಿದೆ” ಎಂದು ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರದಲ್ಲಿ ಅಚ್ಯುತ್‌ ಕುಮಾರ್‌ ಪ್ರಮುಖ ಪಾತ್ರ ಮಾಡಿದ್ದಾರೆ. ಎಸ್ತರ್‌ ನರೋನ್ಹಾ, ರೋಜರ್‌ ನಾರಾಯಣ್‌, ಮಾಸ್ಟರ್‌ ಆನಂದ್‌ ಪುತ್ರ ಮಾಸ್ಟರ್‌ ಕೃಷ್ಣ ಚೈತನ್ಯ, ಮಾಸ್ಟರ್‌ ಧೃವ ಮೇಹು, ನೀನಾಸಂ ಶ್ವೇತಾ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ.

ಶಿವರಾಜ್‌ ಮೇಹು ಸಂಕಲನ, ರವಿಕುಮಾರ್‌ ಸಾನಾ ಛಾಯಾಗ್ರಹಣ, ಯೋಗರಾಜ್‌ ಭಟ್‌, ಜಯಂತ್‌ ಕಾಯ್ಕಿಣಿ, ಪ್ರಕಾಶ್‌ ರಾಜ್‌ ಮೇಹು ಸಾಹಿತ್ಯ ಚಿತ್ರಕ್ಕಿದೆ. ಚೇತನ್‌ ಸಂಗೀತ ನೀಡಿದ್ದಾರೆ.

ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಯು’ ಪ್ರಮಾಣ ಪತ್ರ ನೀಡಿದೆ. ಬಹು ತಾರಾಗಣದ ಆರ್ ಆರ್ ಆರ್ ಚಿತ್ರದ ಜೊತೆಗೆ ಈ ಚಿತ್ರ ಚಿತ್ರಮಂದಿರಕ್ಕಾಗಿ ಪೈಪೋಟಿ ನಡೆಸಬೇಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!