ಫಸ್ಟ್ ಡೇ ಫಸ್ಟ್ ಶೋ

ಸಿನಿಮಾದವರ ಬದುಕಿನ ಕಥೆ ‘ಫಸ್ಟ್ ಡೇ ಫಸ್ಟ್ ಶೋ’

ಚಿತ್ರ: ಫಸ್ಟ್ ಡೇ ಫಸ್ಟ್ ಶೋ
ನಿರ್ದೇಶಕ: ಗಿರೀಶ್ ಜಿ
ತಾರಾ ಬಳಗ: ಗಿರೀಶ್ ಜಿ, ಜೀವಿತಾ ವಸಿಷ್ಠ, ರೋಹಿತ್ ಶ್ರೀನಾಥ್, ಅನಿರುದ್ಧ ಶಾಸ್ತ್ರಿ, ಬಿಎಂ ವೆಂಕಟೇಶ್, ಶೋಭಿತಾ ಶಿವಣ್ಣ ಇತರರು
ರೇಟಿಂಗ್: 3.5

ಸಿನಿಮಾದವರ ತೆರೆಯ ಹಿಂದಿನ ಬದುಕನ್ನು ತೆರೆದಿಡುತ್ತದೆ ಈ ವಾರ ತೆರೆಗೆ ಬಂದಿರುವ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ.

ಈ ಚಿತ್ರ ಸಿನಿಮಾವನ್ನು ಸಿನಿಮಾದೊಳಗೆ ತೋರಿಸುವ ಯತ್ನವನ್ನು ಮಾಡುತ್ತದೆ. ಕ್ಯಾಪ್ಟನ್ ಕರ್ನಾಟಕ ಎಂಬ ಸಿನಿಮಾ ಬಿಡುಗಡೆ ಆಗಲು ಒಂದು ದಿನ ಇರುತ್ತದೆ ಎನ್ನುವಾಗ ಕೊನೆ ಕ್ಷಣದಲ್ಲಿ ವಿಘ್ನ ಎದುರಾಗುತ್ತದೆ. ಆಗ ಚಿತ್ರತಂಡ ಯಾವ ರೀತಿ ಆತಂಕ, ಕಷ್ಟ ಪಡುತ್ತದೆ ಎನ್ನುವುದನ್ನು ಈ ಚಿತ್ರ ತೋರಿಸುತ್ತದೆ.

ಒಂದು ಚಿತ್ರವನ್ನು ನಂಬಿಕೊಂಡು ಕಲಾವಿದರು, ನಿರ್ದೇಶಕರು ಮಾತ್ರ ಬದುಕುವುದಿಲ್ಲ. ಸಿನಿಮಾದ ಗೆಲುವು ಹಾಗೂ ಸೋಲಿನಲ್ಲಿ ಸಾವಿರಾರು ಜನರ ಬದುಕು ಇರುತ್ತದೆ. ಇವೆಲ್ಲವನ್ನು ಕಟ್ಟಿಕೊಡುವ ಯತ್ನವನ್ನು ಚಿತ್ರ ಮಾಡಿದೆ. ಸಿನಿಮಾ ಕಟ್ಟಿಕೊಡುವ, ಅದನ್ನು ತೆರೆಗೆ ತರುವ ಯತ್ನದಲ್ಲಿ ಯಾವ ರೀತಿಯ ಕಷ್ಟಗಳು ಇರುತ್ತವೆ ಎನ್ನುವುದನ್ನು ನೋಡಲು ಈ ಚಿತ್ರವನ್ನು ನೋಡಬೇಕು.

ಅವಕಾಶ ಕೊಡುವುದಾಗಿ ನಟಿಯರಿಗೆ ಮೋಸ ಮಾಡುವ ನಿರ್ಮಾಪಕರು, ದುಡ್ಡು ಹೊಡೆಯಲು ಯತ್ನಿಸುವ ಮ್ಯಾನೇಜರ್ ಗಳು, ಪ್ರಚಾರದ ಹೆಸರಿನಲ್ಲಿ ಯಾಮಾರಿಸುವ ಪ್ರಚಾರಕರ್ತರು ಈ ರೀತಿ ಆಗುವ ಹಲವು ಮೋಸಗಳನ್ನು ಚಿತ್ರದಲ್ಲಿ ಹೇಳಲಾಗಿದೆ.

ತೆರೆಯ ಹಿಂದಿನ ಕಥೆಯನ್ನು ಹೇಳುವ ಈ ಚಿತ್ರದಲ್ಲಿ ಥ್ರಿಲ್ಲಿಂಗ್ ಅಂಶಗಳು ಕೂಡಾ ಇವೆ. ಕ್ಯಾಪ್ಟನ್ ಕರ್ನಾಟಕ ಚಿತ್ರ ಬಿಡುಗಡೆ ಆಯಿತೇ, ಇಲ್ಲವೇ ಅನ್ನೋದನ್ನು ತಿಳಿಯಲು ಚಿತ್ರವನ್ನು ಕೊನೆಯವರೆಗೆ ನೋಡಬೇಕಾಗುತ್ತದೆ.

ನಿರ್ಮಾಪಕನ ಪಾತ್ರದಲ್ಲಿ ಬಿಎಂ ವೆಂಕಟೇಶ್ ಉತ್ತಮವಾಗಿ ನಟಿಸಿದ್ದಾರೆ. ನಿರ್ದೇಶಕನಾಗಿ ರೋಹಿತ್ ಶ್ರೀನಾಥ್, ಸಹಾಯಕ ನಿರ್ದೇಶಕನಾಗಿ ಗಿರೀಶ್ ಹಾಗೂ ಅನಿರುದ್ಧ ಗಮನ ಸೆಳೆಯುತ್ತಾರೆ. ಜೀವಿತಾ ವಸಿಷ್ಠ, ಶೋಭಿತಾ ಶಿವಣ್ಣ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ಚಿತ್ರವೊಂದು ತೆರೆಯ ಮೇಲೆ ಬರುವ ಹೊತ್ತಿಗೆ ಯಾವ ರೀತಿ ಸಂಕಷ್ಟಗಳನ್ನು ದಾಟಿಕೊಂಡು ಬರುತ್ತದೆ ಎಂದು ತಿಳಿಯಲು ಬಯಸುವ ಚಿತ್ರ ಪ್ರೇಮಿಗಳಿಗೆ ಈ ಚಿತ್ರ ಇಷ್ಟವಾಗುತ್ತದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!