ದಿಯಾ ಚಿತ್ರ ನಿರ್ಮಾಪಕ ಕೃಷ್ಣಚೈತನ್ಯ ಸೇರಿ ಇತರರ ವಿರುದ್ಧ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯಶಬ್ಧಗಳಿಂದ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ.
ನೇತಾಜಿ ನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರು ದೂರು ನೀಡಿದ್ದು, ದೂರಿನ ಅನ್ವಯ ಚಿತ್ರ ನಿರ್ಮಾಪಕ ಕೃಷ್ಣಚೈತನ್ಯ, ಸತ್ಯನಾರಾಯಣ ರೆಡ್ಡಿ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯ ಸರ್ಕಾರ ಡಿಸಿಆರ್‌ಇ ಠಾಣೆಗಳಿಗೆ ಮಾನ್ಯತೆ ನೀಡಿದ ಬಳಿಕ ರಾಜಧಾನಿಯಲ್ಲಿ ಜಾತಿ ದೌರ್ಜನ್ಯ ಸಂಬಂಧ ದಾಖಲಾದ ಮೊದಲ ಪ್ರಕರಣ ಇದಾಗಿದೆ. ಪೂರ್ವವಿಭಾಗದ ನಾಗರಿಕ ಹಕ್ಕು ಜಾರಿನಿರ್ದೇಶನಾಲಯ (ಡಿಸಿಆರ್‌ಇ) ಠಾಣೆಯಲ್ಲಿ ಪೊಲೀಸರು ಶುಕ್ರವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರ್ತೂರು ಹೋಬಳಿ ಕಸವನಹಳ್ಳಿ ಗ್ರಾಮದಲ್ಲಿರುವ 3 ಎಕರೆ 35 ಗುಂಟೆ ಜಮೀನನ್ನು ಭೋಗ್ಯಕ್ಕೆ ಪಡೆದಿರುವ ಮಹಿಳೆ ನರ್ಸರಿ ನಡೆಸುತ್ತಿದ್ದಾರೆ. ಆ.10ರಂದು ಜಮೀನಿನ ಬಳಿ ಕಾರಿನಲ್ಲಿ ಆಗಮಿಸಿದ್ದ ಕೃಷ್ಣಚೈತನ್ಯ, ಸತ್ಯನಾರಾಯಣ ರೆಡ್ಡಿ ಹಾಗೂ ಇತರರು ಬೀಗವನ್ನು ಮುರಿದು ಒಳಬಂದು ಮಹಿಳೆಗೆ ಅವಾಚ್ಯಶಬ್ಧಗಳಿಂದ ಜಾತಿನಿಂದನೆ ಮಾಡಿದ್ದಾರೆ. ಜೊತೆಗೆ ದೇಹದ ಖಾಸಗಿ ಅಂಗಗಳನ್ನು ಮುಟ್ಟಿ ಹಲ್ಲೆ ನಡೆಸಿ ಜಮೀನು ಸ್ಥಳ ಬಿಟ್ಟು ಕೊಡದಿದ್ದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.
ಸಂತ್ರಸ್ತ ಮಹಿಳೆ ಬೆಳ್ಳಂದೂರು ಠಾಣೆಯಲ್ಲಿ ದೂರು ನೀಡಲು ತೆರಳಿದ್ದು ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಹಲವು ಬಾರಿ ದೂರು ನೀಡಿದರೂ ಪೊಲೀಸರು ಸಬೂಬು ಹೇಳಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯಿದೆ ಪ್ರಕರಣಗಳ ತನಿಖೆ ಸಲುವಾಗಿ ಸ್ಥಾಪಿಸಲಾಗಿರುವ ಡಿಸಿಆರ್‌ಇ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
—–





Be the first to comment