ಕೊರೋನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳಿಗೆ ವಿಧಿಸಿದ್ದ ಶೇ.50 ಪ್ರೇಕ್ಷಕರ ವೀಕ್ಷಣೆ ನಿರ್ಬಂಧ ತೆರವು ಮಾಡಲು ಸರ್ಕಾರ ಕೆಲವೇ ದಿನಗಳಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಕರಣಗಳು ಕಡಿಮೆ ಆಗುತ್ತಿರುವ ಕಾರಣ ಪೂರ್ಣ ಪ್ರಮಾಣದ ಸೀಟು ಸಾಮರ್ಥ್ಯದೊಂದಿಗೆ ಚಿತ್ರ ಪ್ರದರ್ಶಿಸಲು ಬಿಬಿಎಂಪಿ ಒಪ್ಪಿಗೆ ನೀಡಿದೆ. ಸರ್ಕಾರ ತಜ್ಞರ ಸಮಿತಿಯೊಂದಿಗೆ ಚರ್ಚೆ ನಡೆಸಿದ ಬಳಿಕ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಸಿನಿಮಾ ಥಿಯೇಟರ್ ಗಳಲ್ಲಿ ಶೇ.100ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡಿದಲ್ಲಿ ಹೆಚ್ಚಿನ ಸಂಖ್ಯೆಯ ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆ ಇದೆ. ಸ್ಟಾರ್ ನಟರ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಗೆ ಸರಕಾರ ಅವಕಾಶ ನೀಡಿದಲ್ಲಿ ಬಿಗ್ ಬಜೆಟ್ ಚಿತ್ರಗಳು ಶೀಘ್ರವೇ ಬೆಳ್ಳಿ ತೆರೆಗೆ ಬರಲಿವೆ. ಇದರಿಂದ ನಟರ ಅಭಿಮಾನಿಗಳು, ಸಿನಿ ರಸಿಕರು ಚಿತ್ರಮಂದಿರಗಳತ್ತ ಮತ್ತೆ ಮುಖ ಮಾಡುವ ನಿರೀಕ್ಷೆ ಹೊಂದಲಾಗಿದೆ.
ಕೆಲ ದಿನಗಳ ಹಿಂದೆ ರಾಜ್ಯದ ಚಿತ್ರ ಮಂದಿರಗಳಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ ನೀಡುವಂತೆ ಚಿತ್ರ ನಿರ್ಮಾಪಕರು ಆರೋಗ್ಯ ಸಚಿವ ಕೆ.ಸುಧಾಕರ್ ಅವರಿಗೆ ಮನವಿ ಸಲ್ಲಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸುವುದಾಗಿ ಸಚಿವ ಸುಧಾಕರ್ ಭರವಸೆ ನೀಡಿದ್ದಾರೆ.
ಲಾಕ್ ಡೌನ್ ತೆರವು ಮಾಡಿದ ಬಳಿಕ ಕೆಲವೇ ಕೆಲವು ಚಿತ್ರಗಳು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿವೆ. ಕಲಿವೀರ, ಗ್ರೂಫಿ, ಲಂಕೆ, ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ, ಜಿಗ್ರಿದೋಸ್ತ್ ಸೇರಿದಂತೆ ಕೆಲ ಸಿನಿಮಾಗಳು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿವೆ. ಬಹು ನಿರೀಕ್ಷಿತ ಸ್ಟಾರ್ ನಟರ ಚಿತ್ರಗಳಾದ ಕೋಟಿಗೊಬ್ಬ 3, ವಿಕ್ರಾಂತ್ ರೋಣ, ಭಜರಂಗಿ 2, ಬಡವ ರಾಸ್ಕಲ್ ಚಿತ್ರಗಳು ಇನ್ನೂ ಬಿಡುಗಡೆ ಆಗಿಲ್ಲ. ಸ್ಟಾರ್ ನಟರ ಕೆಲ ಚಿತ್ರಗಳು ಚಿತ್ರದ ರಿಲೀಸ್ ದಿನಾಂಕವನ್ನು 2022ಕ್ಕೆ ಘೋಷಿಸಿವೆ.
__________
Be the first to comment