ಕನ್ನಡ ಸೇರಿದಂತೆ ಪರಭಾಷೆಯ ಒಟ್ಟು 31 ಚಿತ್ರಗಳು ಇಂದು ರಿಲೀಸ್ ಆಗಿವೆ.
ಕನ್ನಡದಲ್ಲಿ ಒಟ್ಟು 7 ಚಿತ್ರಗಳು ಬಿಡುಗಡೆ ಆಗಿವೆ. ತೆಲುಗಿನ ಒಂಬತ್ತು ಚಿತ್ರಗಳು, ತಮಿಳಿನ 4, ಮಲಯಾಳಂ ಒಂಬತ್ತು ಚಿತ್ರಗಳು ಇಂದು ತೆರೆ ಕಂಡಿವೆ. ಇಷ್ಟೊಂದು ಪ್ರಮಾಣದಲ್ಲಿ ಪರಭಾಷೆ ಚಿತ್ರಗಳು ಬಿಡುಗಡೆ ಆಗುತ್ತಿರುವುದು ಕನ್ನಡ ಚಿತ್ರಗಳಿಗೆ ಥಿಯೇಟರ್ ಸಿಗಲು ಪರದಾಡುವಂತೆ ಮಾಡಿದೆ.
ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ‘ಸೈಡ್ ಬಿ’, ರಾಜಯೋಗ, ದಿ ವೆಕೆಂಟ್ ಹೌಸ್, ನೇತ್ರಂ, ಬೆಂಬಿಡದ ನಾವಿಕ, ಭಾಯ್, ಮಂಗಳವಾರಂ ಇಂದು ಬಿಡುಗಡೆ ಆಗಿರುವ ಕನ್ನಡ ಚಿತ್ರಗಳಾಗಿವೆ.
ಹೇಮಂತ್ ಎಂ ರಾವ್ ಆಕ್ಷನ್ ಕಟ್ ಹೇಳಿರುವ ಸಪ್ತ ಸಾಗರದಾಚೆ ಎಲ್ಲೋ ‘ಸೈಡ್ ಬಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಾಯಕಿಯರಾಗಿ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ ಆಚಾರ್ ಕಾಣಿಸಿಕೊಳ್ಳಲಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಸೀಕ್ವೆಲ್ ರಿಲೀಸ್ ಆಗುತ್ತಿರುವ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರಕ್ಕಿದೆ. ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಇತ್ತೀಚೆಗಷ್ಟೇ ತೆರೆಕಂಡು ಸೂಪರ್ ಹಿಟ್ ಆಗಿದೆ.
ನಟಿ ಎಸ್ತರ್ ನರೋನ್ಹಾ ‘ದಿ ವೆಕೆಂಟ್ ಹೌಸ್’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣ, ಸಂಗೀತ ನಿರ್ದೇಶನ, ನಟನೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಕನ್ನಡ ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ನರೇಂದ್ರ ಗೌಡ ಛಾಯಾಗ್ರಹಣ, ವಿಜಯ್ ರಾಜ್ ಸಂಕಲನವಿದೆ. ‘ದಿ ವೆಕೆಂಟ್ ಹೌಸ್’ ಸಿನಿಮಾವನ್ನು ಬಹುತೇಕ ಮಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.
ಅಜಯ್ ಭೂಪತಿ ನಿರ್ದೇಶನದ ‘ಮಂಗಳವಾರಂ’ ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗಿದೆ. ಇದು ಆಕ್ಷನ್ ಥ್ರಿಲ್ಲರ್ ತೆಲುಗು ಸಿನಿಮಾವಾಗಿದ್ದು, ಪಾಯಲ್ ರಜಪೂತ್, ಶ್ರೀತೇಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚೈತನ್ಯ ಕೃಷ್ಣ, ಅಜಯ್ ಘೋಷ್, ಲಕ್ಷ್ಮಣ್ ಸೇರಿದಂತೆ ಹಲವಾರು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ದಶರಥಿ ಶಿವೇಂದ್ರ ಛಾಯಾಗ್ರಹಣ, ರಘು ಕುಲಕರ್ಣಿ ಕಲಾ ನಿರ್ದೇಶನ ಚಿತ್ರಕ್ಕಿದೆ. ‘ಕಾಂತಾರ’ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ರಾಮ ರಾಮಾ ರೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಟ ಧರ್ಮಣ್ಣ ಅವರು ‘ರಾಜಯೋಗ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಲಿಂಗರಾಜ್ ಉಚ್ಚಂಗಿ ದುರ್ಗ ನಿರ್ದೇಶನದ ಈ ಚಿತ್ರದಲ್ಲಿ ನಿರೀಕ್ಷಾ ರವಿ ಗೃಹಿಣಿಯಾಗಿ ನಟಿಸಿದ್ದಾರೆ. ದೀಕ್ಷಿತ್ ಕೃಷ್ಣ, ಕೃಷ್ಣಮೂರ್ತಿ ಕವತ್ತಾರ, ಶ್ರೀನಿವಾಸ್ ಗೌಡ್, ಉಷಾ ರವಿಶಂಕರ್, ಮಹಾಂತೇಶ್ ಹಿರೇಮಠ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
Be the first to comment