ಇಂದು 4 ಬಹುನಿರೀಕ್ಷಿತ ಸಿನಿಮಾ ಬಿಡುಗಡೆ

ಸ್ಯಾಂಡಲ್​ವುಡ್​ನಲ್ಲಿ ಸೆಪ್ಟೆಂಬರ್​ 28ರಂದು 4 ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ ‘ಬಾನ ದಾರಿಯಲಿ’, ರಾಘವ​ ಲಾರೆನ್ಸ್​​ ಮತ್ತು ಕಂಗನಾ ರಣಾವತ್ ಮುಖ್ಯಭೂಮಿಕೆಯ ‘ಚಂದ್ರಮುಖಿ 2’, ವಿವೇಕ್​​  ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್​ ವಾರ್’, ನವರಸ ನಾಯಕ ಜಗ್ಗೇಶ್​ ಮತ್ತು ಡಾಲಿ ಧನಂಜಯ್​ ನಟನೆಯ ‘ತೋತಾಪುರಿ 2’  ಥಿಯೇಟರ್​ಗೆ ಬರುತ್ತಿದೆ. ‘ಬಾನ ದಾರಿಯಲಿ’ ಮತ್ತು ‘ತೋತಾಪುರಿ 2’ ಕನ್ನಡ ಸಿನಿಮಾವಾದರೆ, ಉಳಿದೆರಡು ಚಿತ್ರಗಳು ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗಲಿದೆ.

‘ಬಾನ ದಾರಿಯಲಿ’: ಗೋಲ್ಡನ್ ಸ್ಟಾರ್ ಗಣೇಶ್, ಪ್ರೀತಂ ಗುಬ್ಬಿ ಕಾಂಬೋದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಬಾನದಾರಿಯಲಿ’. ಗಣೇಶ್​ಗೆ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ.  ಅಭಿಷೇಕ್ ಕಲ್ಲತ್ತಿ ಛಾಯಾಗ್ರಾಹಣ, ಮಾಸ್ತಿ  ಸಂಭಾಷಣೆ ಹಾಗೂ ಅರ್ಜುನ್ ಜನ್ಯ ಸಂಗೀತವಿದೆ.

‘ಬಾನದಾರಿಯಲಿ’ ಸಿನಿಮಾ ಸೆಪ್ಟೆಂಬರ್ 28ರಂದು ಕೆಆರ್​ಜಿ ಸ್ಟುಡಿಯೋಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.

‘ತೋತಾಪುರಿ 2’: ಒಂದೇ ಸೂರಿನಡಿ ಬದುಕುತ್ತಿರುವ ನಾವೆಲ್ಲ ಒಂದೇ ಎನ್ನುವ ಭಾವೈಕ್ಯತೆಯ ಸಂದೇಶ ಹೊಂದಿದ್ದ ‘ತೋತಾಪುರಿ’ ಚಿತ್ರ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮುಂದುವರಿದ ಭಾಗ ‘ತೋತಾಪುರಿ 2’ ತೆರೆಕಾಣಲು ಸಿದ್ಧವಾಗಿದೆ.

‘ಸಿದ್ಲಿಂಗು’ ಖ್ಯಾತಿಯ ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ತೋತಾಪುರಿ 2’ ಚಿತ್ರದಲ್ಲಿ ನವರಸನಾಯಕ ಜಗ್ಗೇಶ್​ ಮತ್ತು ಡಾಲಿ ಧನಂಜಯ್​ ಅಭಿನಯಿಸಿದ್ದಾರೆ.

‘ಚಂದ್ರಮುಖಿ 2’: ಖ್ಯಾತ ನಿರ್ದೇಶಕ, ನಟ  ರಾಘವ​ ಲಾರೆನ್ಸ್​​ ಮತ್ತು ಬಾಲಿವುಡ್​ ನಟಿ ಕಂಗನಾ ರಣಾವತ್​ ನಟನೆಯ ಬಹುನಿರೀಕ್ಷಿತ ಚಿತ್ರ ‘ಚಂದ್ರಮುಖಿ 2’.  ಹಾರರ್​ ಕಾಮಿಡಿ ಸಿನಿಮಾ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿದೆ. 2005 ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್​ ಸಿನಿಮಾ ಚಂದ್ರಮುಖಿ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್​ಸ್ಟಾರ್​ ರಜನಿಕಾಂತ್​ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್​ ಲೀಸ್ಟ್​ ಸೇರಿತ್ತು.

18 ವರ್ಷದ ಬಳಿಕ ಚಂದ್ರಮುಖಿ ಪಾರ್ಟ್​ 2 ಬರುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರವು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸೆಪ್ಟಂಬರ್​ 28ರಂದು ಬಿಡುಗಡೆಯಾಗಲಿದೆ.

‘ದಿ ವ್ಯಾಕ್ಸಿನ್​ ವಾರ್’: ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ‘ದಿ ಕಾಶ್ಮೀರಿ ಫೈಲ್ಸ್​’ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ದೇಶಕ ವಿವೇಕ್​ ರಂಜನ್​ ಅಗ್ನಿಹೋತ್ರಿ   ಕೊರೊನಾ ಸೋಂಕಿಗೆ ಮದ್ದು ಅರೆದ ಭಾರತದ ವಿಜ್ಞಾನಿಗಳ ಸಾಧನೆಯನ್ನು ಅನಾವರಣ ಮಾಡುವ ‘ದಿ ವ್ಯಾಕ್ಸಿನ್​ ವಾರ್​’ ಚಲನಚಿತ್ರ ತಯಾರಿಸಿದ್ದಾರೆ. ಸಿನಿಮಾವು ಕನ್ನಡ ಸೇರಿದಂತೆ 11 ಭಾಷೆಗಳಲ್ಲಿ ಸೆಪ್ಟೆಂಬರ್​ 28ರಂದು ತೆರೆ ಕಾಣಲಿದೆ.

ಈ ಚಿತ್ರದಲ್ಲಿ ಬಾಲಿವುಡ್ ನಟ ಅನುಪಮ್ ಖೇರ್, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಾಶ್ಮೀರಿ ಫೈಲ್ಸ್​ ನಿರ್ಮಾಪಕ ಅಭಿಷೇಕ್​ ಅಗರ್ವಾಲ್​ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

——-

Be the first to comment

Leave a Reply

Your email address will not be published. Required fields are marked *

Translate »
error: Content is protected !!