ಎಂಇಎಸ್ ಪುಂಡಾಟಿಕೆ ವಿರುದ್ಧ ಡಿಸೆಂಬರ್ 31ರಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ಮಾತ್ರ ನೀಡಲು ಮುಂದಾಗಿದೆ.
ಈ ಬಗ್ಗೆ ಸಭೆ ನಡೆಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಡಿಸೆಂಬರ್ 31ರಂದು ಶುಕ್ರವಾರ ಆಗಿದ್ದು, ಅಂದು ಕೆಲವು ಕನ್ನಡ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ಚಿತ್ರರಂಗ ಕೊರೊನಾದಿಂದ ಸಾಕಷ್ಟು ತತ್ತರಿಸಿದೆ. ಇಂಥ ಸಂಕಷ್ಟದ ಸಮಯದಲ್ಲಿ ಬಂದ್ ಆಚರಿಸುವುದು ಸೂಕ್ತವಲ್ಲವೆಂದು ಚಿತ್ರರಂಗ ಬಂದ್ ಮಾಡುವ ನಿರ್ಣಯದಿಂದ ಹಿಂದೆ ಸರಿಯುವ ನಿರ್ಣಯ ಕೈಗೊಂಡಿದೆ.
ಈ ಹಿಂದೆ ವಾಣಿಜ್ಯ ಮಂಡಳಿಯ ಸಾರಾ.ಗೋವಿಂದು, ”ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲವಿದೆ. ಅಂದು ಚಿತ್ರರಂಗ ಎಲ್ಲ ರೀತಿಯ ಕಾರ್ಯಚಟುವಟಿಕೆಯನ್ನು ಬಂದ್ ಮಾಡಿ ಬಂದ್‌ಗೆ ಬೆಂಬಲ ನೀಡಲಿದೆ” ಎಂದಿದ್ದರು.
ಸಾರಾ.ಗೋವಿಂದು ಅವರ ಏಕಪಕ್ಷೀಯ ನಿರ್ಣಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ‘ಲವ್ ಯೂ ರಚ್ಚು’ ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆ ಅವರು ಇದನ್ನು ಬಹಿರಂಗವಾಗಿ ಖಂಡಿಸಿದ್ದರು. “ಹೊಸ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಬಂದ್ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ” ಎಂದು ಖಾರವಾಗಿ ಟೀಕಿಸಿದ್ದರು.
ಚಲನಚಿತ್ರ ವಾಣಿಜ್ಯ ಮಂಡಳಿ ಈಗ ಬಂದ್ ಗೆ ಕೇವಲ ನೈತಿಕ ಬೆಂಬಲ ಘೋಷಿಸಿರುವುದು ಚಿತ್ರ ನಿರ್ಮಾಪಕರಿಗೆ ಸಂತಸ ತಂದಿದೆ. ಡಿಸೆಂಬರ್ 31ರಂದು ‘ಲವ್ ಯೂ ರಚ್ಚು’ ಅಲ್ಲದೇ, ಪ್ರಜ್ವಲ್ ದೇವರಾಜ್ ನಟನೆಯ “ಅರ್ಜುನ್ ಗೌಡ”, ಯೋಗಿ ನಟನೆಯ “ಒಂಬತ್ತನೇ ದಿಕ್ಕು”, ದಿಗಂತ್ ನಟನೆಯ “ಹುಟ್ಟುಹಬ್ಬದ ಶುಭಾಶಯಗಳು” ಚಿತ್ರಗಳು ತೆರೆಗೆ ಬರುತ್ತಿವೆ.
ವಾಟಾಳ್ ಟೀಕೆ: ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೈತಿಕ ಬೆಂಬಲ ಮಾತ್ರ ನೀಡುವ ಬಗ್ಗೆ ಕನ್ನಡಪರ ಹೋರಾಟಗಾರರ ವಾಟಾಳ್ ನಾಗರಾಜ್ ಟೀಕೆ ವ್ಯಕ್ತಪಡಿಸಿದ್ದಾರೆ.
“ಫಿಲಂ ಚೇಂಬರ್ ನೈತಿಕ ಬೆಂಬಲ ನೀಡುವುದು ಬೇಡ. ನಮಗೆ ಬೀದಿಗಿಳಿದು ಬೆಂಬಲ ನೀಡಬೇಕು. ನಾವೆಲ್ಲ ಬಂದ್ ಗಾಗಿ ಬೀದಿಯಲ್ಲಿ ಹೋರಾಟ ಮಾಡಬೇಕಾ? ಅವರು ಮಾತ್ರ ನೈತಿಕ ಬೆಂಬಲ ನೀಡಿ ಮನೆಯಲ್ಲಿರಬೇಕು. ಕನ್ನಡದವರು ನಿಮ್ಮ ಸಿನಿಮಾಗಳನ್ನು ನೋಡಬೇಕು. ಆದರೆ ನೀವು ಕನ್ನಡಪರ ಹೋರಾಟಕ್ಕೆ ನೈತಿಕ ಬೆಂಬಲ ಮಾತ್ರ ನೀಡುತ್ತೀರಿ. ಕನ್ನಡ ಚಿತ್ರರಂಗ ಪರ ನಾನು ಹೋರಾಟ ಮಾಡಿದ್ದೇನೆ” ಎಂದುಹೇಳಿದ್ದಾರೆ.
“ಎಂಇಎಸ್ ನವರು ಕನ್ನಡ ಬಾವುಟ ಸುಟ್ಟಿದ್ದರು. ಅನಂತರ ರಾಯಣ್ಣ ಪ್ರತಿಮೆ ಹಾಳು ಮಾಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನೀವು ನೈತಿಕ ಬೆಂಬಲ ಅಂತೀರಲ್ಲ? ಚಿತ್ರರಂಗದವರು ನೀವು ಮೊದಲು ಬೆಂಬಲ ನೀಡಬೇಕು. ಬಾವುಟ ಸುಟ್ಟು ಹಾಕಿರುವುದಕ್ಕೆ ನೈತಿಕ ಬೆಂಬಲ ನೀಡಿದರೆ ಕನ್ನಡ ಬಾವುಟವನ್ನು ಸುಡಲು ನಿಮ್ಮ ಬೆಂಬಲ ಇದೆ ಎಂದು ಅರ್ಥವಾಗುತ್ತದೆ. ನಿಮ್ಮ ನೈತಿಕ ಬೆಂಬಲ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆʼ ಎಂದು ವಾಟಾಳ್ ಗುಡುಗಿದ್ದಾರೆ.
Be the first to comment