ಫೈಟರ್ ಚಿತ್ರ ಅಕ್ಟೋಬರ್ 6 ರಂದು ರಾಜ್ಯಾದಂತ ಬಿಡುಗಡೆಯಾಗಲಿದೆ.
ಈ ಬಗ್ಗೆ ಚಿತ್ರತಂಡ ಘೋಷಣೆ ಮಾಡಿದ್ದು, ಚಿತ್ರ ನೋಡಿ ಹರಸಿ, ಬೆಂಬಲಿಸುವಂತೆ ಮನವಿ ಮಾಡಿದೆ. ಮುಂದಿನ ಕೆಲ ದಿನಗಳಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಆಗುವ ನಿರೀಕ್ಷೆ ಇದೆ.
ವಿನೋದ್ ಪ್ರಭಾಕರ್ ನಾಯಕ ನಟನಾಗಿ ನಟಿಸಿರುವ ಫೈಟರ್ ಚಿತ್ರಕ್ಕೆ ನೂತನ್ ಉಮೇಶ್ ಅವರು ನಿರ್ದೇಶನ ಮಾಡಿದ್ದಾರೆ. ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಸೋಮಶೇಖರ್ ಕೊಟ್ಟಿಗೆನಹಳ್ಳಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.
ಸಾಮಾಜಿಕ ಒಳಿತಿಗಾಗಿ ನಾಯಕ ಸಮಾಜದ ಸಮಸ್ಯೆಗಳ ವಿರುದ್ಧ ಯಾವ ರೀತಿ ಹೋರಾಡುತ್ತಾನೆ ಎನ್ನುವುದು ಫೈಟರ್ ಚಿತ್ರದ ಕಥೆ ಆಗಿದೆ. ಇತ್ತೀಚೆಗೆ ಸಾಹಸ ದೃಶ್ಯದ ಚಿತ್ರೀಕರಣ ಭರ್ಜರಿಯಾಗಿ ಚಿತ್ರದುರ್ಗದ ಕೋಟೆಯಲ್ಲಿ ನಡೆದಿದೆ.
ಫೈಟರ್ ಚಿತ್ರದಲ್ಲಿ ಒಟ್ಟು ಐದು ಆಕ್ಷನ್ ದೃಶ್ಯಗಳಿವೆ. ಸಾಹಸ ದೃಶ್ಯ ಪ್ರಧಾನ ಆಗಿರುವ ಈ ಚಿತ್ರಕ್ಕೆ ಥ್ರಿಲ್ಲರ್ ಮಂಜು ಅವರು ಸಾಹಸ ದೃಶ್ಯ ಕಂಪೋಸ್ ಮಾಡಿದ್ದಾರೆ.
ಈಗಾಗಲೇ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಎರಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಪ್ಟೆಂಬರ್ 13ರಂದು ಫೈಟರ್ ಚಿತ್ರದ ಡ್ಯುಯೆಟ್ ಹಾಡು ಬಿಡುಗಡೆ ಆಗಿದ್ದು ಉತ್ತಮ ಸ್ಪಂದನೆ ದೊರೆತಿದೆ.
ಚಿತ್ರವನ್ನು ಚಿತ್ರದುರ್ಗ ಅಲ್ಲದೆ ಪಾಂಡಿಚೇರಿ, ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ 65 ದಿನಗಳ ಕಾಲ ಚಿತ್ರಿಕರಣ ಮಾಡಲಾಗಿದೆ. ವಿನೋದ್ ಪ್ರಭಾಕರ್ ಅವರಿಗೆ ನಾಯಕಿಯಾಗಿ ಲೇಖಚಂದ್ರ ಹಾಗೂ ಪಾವನ ಗೌಡ ಅವರು ಕಾಣಿಸಿಕೊಂಡಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ನಿರೋಷ ಅವರು ನಟಿಸಿದ್ದಾರೆ.
ಗಿರಿಜಾ ಲೋಕೇಶ್, ಜಹಾಂಗೀರ್, ಚಲುವರಾಜ್, ಕುರಿ ಪ್ರತಾಪ್ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಗುರುಕಿರಣ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶೇಖರ್ ಚಂದ್ರು ಅವರು ಕ್ಯಾಮರಾ ಕೆಲಸ ಮಾಡಿದ್ದಾರೆ.
Be the first to comment